ಕನ್ನಡಪ್ರಭ ವಾರ್ತೆ ಹಾಸನನಗರದ ಪಾರ್ಕ್ ರಸ್ತೆಯಲ್ಲಿರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಮಾರುತಿ ಆರತಿ ಹಾಗೂ ದೀಪಧಾರತಿ ಕಾರ್ಯಕ್ರಮ ಭಕ್ತಿಭಾವ ಮತ್ತು ಧಾರ್ಮಿಕ ಸಂಭ್ರಮದೊಂದಿಗೆ ನಡೆಯಿತು.ರಾಷ್ಟ್ರ ರಕ್ಷಣಾ ಸೇನೆ ಸಂಘಟನೆಯ ತ್ರಣವ್ ಸುರೇಶಗೌಡ ಹಾಗೂ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಧರ್ಮ ನಾಯಕ್ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೩೦೦ಕ್ಕೂ ಹೆಚ್ಚು ಮಹಿಳೆಯರು, ಯುವಕ-ಯುವತಿಯರು ದೀಪಧಾರತಿ ಸಲ್ಲಿಸುವ ಮೂಲಕ ಭಕ್ತಿಯಲ್ಲಿ ಮಿಂದೆದ್ದರು. ದೇವಸ್ಥಾನದ ಆವರಣದಲ್ಲಿ ನಡೆದ ದೀಪದಾರತಿ ಮತ್ತು ಧೂಪಧಾರತಿ ಕಾರ್ಯಕ್ರಮ ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಮೆರಗುಗೊಳಿಸಿತು. ಸಾಮೂಹಿಕವಾಗಿ ದೀಪಗಳನ್ನು ಬೆಳಗಿಸಿ ಮಾರುತಿ ದೇವರಿಗೆ ಆರತಿ ಸಲ್ಲಿಸಿದ ದೃಶ್ಯ ಭಕ್ತರ ಗಮನ ಸೆಳೆಯಿತು. ಧಾರ್ಮಿಕ ಆಚರಣೆಗಳ ಮೂಲಕ ಆಧ್ಯಾತ್ಮಿಕ ಚಿಂತನೆ, ಸಕಾರಾತ್ಮಕ ಮನೋಭಾವ ಹಾಗೂ ಸಾಮೂಹಿಕ ಭಕ್ತಿಭಾವ ಬೆಳೆಸುವ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಲಕ್ಷ್ಮಿಕಾಂತ್ ಕಂಚಮಾರನಹಳ್ಳಿ, ಕಾಂತಣ್ಣ, ಶ್ರೀರಾಮ ಸೇನೆಯ ಜಾನೇಕೆರೆ ಹೇಮಂತ್, ಹರಿಹರಪುರ ಶ್ರೀಧರ್, ಡಾ. ರಮೇಶ್ ಹಾಗೂ ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಶ್ರೀಕಂಠ ಅವರು ಭಾಗವಹಿಸಿದ್ದರು.ಇದೇ ವೇಳೆ ಚನ್ನರಾಯಪಟ್ಟಣದ ಅನಿತಾ ನಾಗೇಶ್ ಅವರ ತಂಡ ಪ್ರಸ್ತುತಪಡಿಸಿದ ಕೋಲಾಟ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಸಾಂಪ್ರದಾಯಿಕ ಕಲೆಯ ಲಯಬದ್ಧ ಹೆಜ್ಜೆಗಳು ಮತ್ತು ಕಲಾವಿದರ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ದೀಪಧಾರತಿ, ಧೂಪಧಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಮಾರುತಿ ಆರತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಹಿಳೆಯರು ಮತ್ತು ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ವಿಶೇಷವಾಗಿತ್ತು.