ಇಂದರಪಾಶ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿಎರಡನೇ ಶ್ರೀಶೈಲ ಎಂದು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಮಸ್ಕಿ ಆರಾಧ್ಯದೈವ ಮಲ್ಲಿಕಾರ್ಜುನ ದೇವರ ನೂತನ ಮಹಾರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಂಜೆ 5 ಗಂಟೆಗೆ ಅದ್ಧೂರಿಯಾಗಿ ಜರುಗಲಿದೆ.
ಬೃಹದಾಕಾರವಾದ ಸಾಲು ಬೆಟ್ಟದ ಮೇಲೆ ವಿಜಯನಗರ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಭಕ್ತರು ಬೆಟ್ಟದ ಮೇಲೆ ಹೋಗಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಕಷ್ಟವಾಗುತ್ತದೆ ಎಂದು 70ರ ದಶಕದಲ್ಲಿ ಗ್ರಾಮದ ಮುಖಂಡರು ಮಸ್ಕಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮಲ್ಲಿಕಾರ್ಜುನ ದೇವರ ಗುಡಿ ನಿರ್ಮಾಣ ಮಾಡಿದ್ದು, ಶ್ರೀಶೈಲ ಪೀಠದ ಜಗದ್ಗುರುಗಳಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಶ್ವರ ಲಿಂಗು ಸ್ಥಾಪನೆ ಮಾಡಿ ಅಂದಿನಿಂದ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ.ಪ್ರತಿ ವರ್ಷ ಭರತ ಹುಣ್ಣಿಮೆಯಂದು ಮಲ್ಲಿಕಾರ್ಜುನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಶತಮಾನ ಕಂಡ ಬೃಹದಾಕಾರದ ರಥ ಶಿಥಿಲವಾಗಿದ್ದನ್ನು ಮನಗಂಡ ಗ್ರಾಮದ ಮುಖಂಡರು ಈ ವರ್ಷ ನೂತನ ರಥ ನಿರ್ಮಾಣ ಮಾಡಿಸಿದ್ದಾರೆ. ವಿವಿಧ ರೀತಿ ಪೂಜಾ ಕೈಂಕರ್ಯಗಳು ನಡೆದಿದ್ದು ಹೋಮ ಹವನ, ಉತ್ಸವ ಮೂರ್ತಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ. ಹಳೆಯ ರಥದಲ್ಲಿದ್ದ ಮೂರ್ತಿಗಳನ್ನು ಯಥಾವತ್ತಾಗಿ ನೂತನ ರಥದಲ್ಲಿ ಶಿಲ್ಪಿ ಯಲ್ಲಪ್ಪ ಬಡಿಗೇರ ಬಾಣಪುರ ಚಿತ್ರಿಸಿದ್ದು ಅತ್ಯಂತ ಆಕರ್ಷಕ ರಥ ನಿರ್ಮಾಣವಾಗಿದೆ.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥವನ್ನು ಲೋಕಾರ್ಪಣೆಗೊಳಿಸಲಿದ್ದು, ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುತ್ತಾರೆ.ಹಿನ್ನೆಲೆ: ಮಲ್ಲಿಕಾರ್ಜುನ ಜಾತ್ರೆಯು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ. ಅವರಾತ್ರಿ ಅಮವಾಸ್ಯೆಯ ನಂತರ ರಥವನ್ನು ತೇರಿನ ಮನೆಯಿಂದ ಹೊರ ತರಲಾಗುತ್ತದೆ. ತೇರನ್ನು ಸಜ್ಜುಗೊಳಿಸುವಲ್ಲಿ ಹಲವು ಸಮುದಾಯದ ಜನ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಾರೆ. ತೇರಿನ ಮೇಲ್ಜಾವಣಿಗೆ ಕಟ್ಟುಗಳನ್ನು ಕಾಳಪ್ಪ ಬಡಿಗೇರ ಸಾನಬಾಳ ಸಾ. ಹುಲ್ಲೂರು ತಯಾರಿಸುತ್ತಾರೆ. ಅವರಿಗೆ ಸಹಕಾರಿಗಳಾಗಿ ಮಸ್ಕಿಯ ಗಂಗಾಮತಸ್ಥ (ಬಾರಿಕೇರ) ಸಮಾಜದವರು ಕೈಜೋಡಿಸುತ್ತಾರೆ.
ಮಸ್ಕಿಯ ಎಲಿಗಾರ ಕುಟುಂಬದವರು ಎಣ್ಣೆ ಕೊಡಿಸುವ ಸೇವೆ ಮಾಡಿದರೆ ಇನ್ನೊಂದು ಎಲಿಗಾರ ಕುಟುಂಬದವರು ಪಟ ಕಟ್ಟುವ ಕೆಲಸಕ್ಕೆ ಚಾಲನೆ ನೀಡುತ್ತಾರೆ. ರಥಕ್ಕೆ ಹೂವಿನಿಂದ ಅಲಂಕೃತಗೊಳಿಸಿ ಸಿಂಗರಿಸುತ್ತಾರೆ. ರಥ ಸರಳವಾಗಿ ಸಾಗಲು ಭೋವಿ ಸಮಾಜದವರು ಸೊನ್ನೆ ಹಾಕುತ್ತಾರೆ.ಅಂದು ಅವರು ರಥ ಎಳೆಯುವವರೆಗೆ ಊಟ ಮಾಡದೆ ಉಪವಾಸ ಆಚರಿಸುತ್ತಾರೆ. ಸೊನ್ನಿ ಹಾಕಲು ಬೇಕಾಗುವ ಕಟ್ಟಿಗೆ ತುಂಡುಗಳನ್ನು ಮೋಚಿ ಸಮಾಜದವರು ತಯಾರಿಸಿ ಕೊಡುತ್ತಾರೆ. ರಥೋತ್ಸವಕ್ಕೆ ಮತ್ತು ಪಲ್ಲಕ್ಕಿ ಮುಂದೆ ಯಂಕಣ್ಣ ಕುಟುಂಬದವರು ದಿವಟಗಿ ಹಿಡಿಯುತ್ತಾರೆ. ಹೀಗೆ ಇಡೀ ವಿವಿಧ ಸಮುದಾಯದವರು ಸೇರಿ ರಥವನ್ನು ಸಿಂಗರಿಸುತ್ತಾರೆ. ರಥೋತ್ಸವಕ್ಕೆ ಮೊದಲು ನಾಲ್ಕು ದಿನ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.
ಮೊದಲನೆ ದಿನ ಧ್ವಜಾರೋಹಣ, 3ನೇ ದಿನ ಪಲ್ಲಕ್ಕಿ ಸೇವೆ 4ನೇ ದಿನ ಕಳಸದ ಮೆರವಣಿಗೆ ನಡೆಯುತ್ತದೆ. 5ನೇ ದಿನ ಪೂಜ್ಯ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಆಗಮಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಹಾಲುಮತ ಸಮಾಜದವರಿಂದ ಡೊಳ್ಳಿನ ಆಗಮನವಾಗುತ್ತದೆ. ಪಟ್ಟಣದ ಪ್ರಮುಖರ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಕಡುಬಿನಕಾಳಗ ಅಂಗವಾಗಿ ದೇವರ ಉಚ್ಛಾಯಿ ಉತ್ಸವ ಜರುಗಲಿದೆ. ವಿವಿಧ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದುಕೊಳ್ಳುವರು.