ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಬಿಇಒ ಕಚೇರಿ ಆವರಣದ ಮಹಾ ಗಣಪತಿ ಶ್ರೀನಿವಾಸ ನಾಯಕ ಬಡಾವಣೆಯಲ್ಲಿ
ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಸೇರಿ ಎರಡೂ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಯಿಂದ ನೆರವೇರಿತು.ಪಟ್ಟಣದ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು.
--
ಡಿಜೆಯ ಸದ್ದು ಇಲ್ಲದೆ ಮೆರವಣಿಗೆ ಸಪ್ಪೆಯಂತೆ ಕಂಡು ಬಂತು. ಸಣ್ಣ ಧ್ವನಿವರ್ಧಕ ಸಂಗೀತ ಮತ್ತು ಡೊಳ್ಳು, ತಮಟೆಯ ಸದ್ದಿಗೆ ಕೆಲ ಯುವಕರು ಹೆಜ್ಜೆ ಹಾಕಿದರೆ. ಇನ್ನು ಕೆಲವರು ಸಪ್ಪೆ ಮೊರೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ಸಾಮಾನ್ಯವಾಗಿ ಕಂಡು ಬಂತು. ಪಟ್ಟಣದ ತುಂಬೆಲ್ಲಾ ಕೇಸರಿ ಬಾವುಟಗಳು ರಾರಾಜಿಸಿದವು. ಕೇಸರಿ ಶಾಲುಗಳನ್ನು ಧರಿಸಿದ್ದ ಭಕ್ತರು ಗಣೇಶನಿಗೆ ಜೈಕಾರ ಹಾಕುತ್ತಾ ಸಾಗಿದ್ದು ವಿಶೇಷವಾಗಿ ಕಂಡುಬಂತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀರಾಮರೆಡ್ಡಿ, ಮಲ್ಲೇಶ್, ನಿಕಟ ಪೂರ್ವ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಇ.ರಾಮರೆಡ್ಡಿ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಮುಖಂಡರಾದ ಚಂದ್ರ ಶೇಖರಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಟಿ.ಟಿ.ರವಿಕುಮಾರ್, ಮುಖಂಡ ತಿಮ್ಮಪ್ಪ, ಯುವ ಮುಖಂಡ ಚಿತ್ರದುರ್ಗ ಸೋಮು, ನಾಯಕನಹಟ್ಟಿ ಶಿವಣ್ಣ, ತಿಮ್ಮಾಪುರ ಮೂರ್ತಿ, ರಾಮಸಾಗರ ತಿಪ್ಪೇಸ್ವಾಮಿ, ಹರೀಶ್ ಕಡೆತೋಟ, ಮೊಗಲ ಹಳ್ಳಿ ಸಿದ್ಧಾರ್ಥ, ಪ್ರಭಾಕರ, ಮಂಜಣ್ಣ, ದೇವಸಮುದ್ರ ಚಂದ್ರಣ್ಣ, ಎಂ.ವೈ.ಟಿ ಸ್ವಾಮಿ, ಪಾಪೇಶ್ ನಾಯಕ ಇದ್ದರು.
ಡಿಜೆ ಅನುಮತಿಗಾಗಿ ಮಾಜಿ ಸಚಿವ ಶ್ರೀರಾಮುಲು ಪ್ರತಿಭಟನೆ:
ನುಂಕಪ್ಪನ ದೇವಸ್ಥಾನ ಮುಂಭಾಗದ ಮುಖ್ಯರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರು, ಯುವತಿಯರು ರಾಮುಲು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿ ಬೇಕೇ ಬೇಕು ಡಿಜೆ ಬೇಕು ಎಂದು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಈ ವೇಳೆ ಪೊಲೀಸರು ರಾಮುಲು ಅವರನ್ನು ಮನವೊಲಿಸುವ ಯತ್ನ ನಡೆಸಿದರು.
ಈ ವೇಳೆ ಮಾತನಾಡಿದ ಶ್ರೀರಾಮುಲು, ರಾಜ್ಯ ಸರ್ಕಾರ ಗಣಪತಿ ವಿಸರ್ಜನೆ ವೇಳೆ ಡಿಜೆಗೆ ಅನುಮತಿ ನೀಡದೆ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ. ಇದೊಂದು ಜನವಿರೋಧಿ ಸರ್ಕಾರ ಪಕ್ಷ ಬೇಧ ಮರೆತು ಸಾಮರಸ್ಯದಿಂದ ಆಚರಿಸುವ ಗಣೇಶ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ ಎಂದು ವಾಗ್ದಾಳಿ ನಡೆಸಿದರು.