ಕನ್ನಡಪ್ರಭ ವಾರ್ತೆ ಇಂಡಿ
ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ನವ ದಂಪತಿಗಳು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕು. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಇಂಡಿ ತಾಲೂಕಿನ ಸುಕ್ಷೇತ್ರ ರೋಡಗಿ ಗ್ರಾಮದ ಜಗದ್ಗುರು ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಹಾಗೂ ಮಂಗಲ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಡವರ ಕುಟುಂಬಗಳಿಗೆ ಸಾಮೂಹಿಕ ವಿವಾಹ ವರದಾನವಿದ್ದಂತೆ. ಇಂಥಾ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವುದು ನಮ್ಮ ಪುಣ್ಯ. ಇಂಥಾ ಮಹತ್ಕಾರ್ಯಗಳು ನಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಾಗುವಂತಾಗಲಿ ಎಂದು ಆಶಿಸಿದರು.ಭಾರತೀಯ ಧರ್ಮ ಪರಂಪರೆಯಲ್ಲಿ ವಿವಾಹಕ್ಕೆ ತನ್ನದೇಯಾದ ಮೌಲ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯಿಂದ ವಿವಾಹವು ಅದರ ಮೌಲ್ಯ ಕಳೆದುಕೊಳ್ಳುತ್ತಿದೆ. ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಶ್ರೀ ಮಠದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಉತ್ತಮ ಕೆಲಸ ಮಾಡಲಾಗಿತ್ತಿದೆ. ದಂಪತಿಗಳು ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಆದರ್ಶ ಜೀವನ ನಡೆಸಬೇಕು. ಇದು ನಿಮ್ಮ ಜೀವನವನ್ನು ಸಾರ್ಥಕಗೊಳಿಸಲಿದೆ. ಹೆತ್ತ ತಂದೆ ತಾಯಿಗಳನ್ನು ಗೌರವದಿಂದ ಕಾಣುವಂತೆ ಕಿವಿಮಾತು ಹೇಳಿದರು.ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಆದರ್ಶ. ಇದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.ಶಿರಶ್ಯಾಡ ಮಠದ ಅಭಿನವ ಮುರುಘೇಂದ್ರ ಶ್ರೀಗಳು ಆಶಿರ್ವಚನ ನೀಡಿ, ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣ. ಸಾಮೂಹಿಕ ವಿವಾಹದಿಂದಾಗಿ ಬಡವರಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿವೆ. ದುಂದುವೆಚ್ಚ. ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.ಗೊಳಸಾರ ಮಠದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ರೋಡಗಿ ಮಠದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ, ಖೇಡಗಿಯ ಶಿವಬಸವರಾಜೇಂದ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಆನಂದ ಶಾಸ್ತ್ರೀ, ಯಶ್ವಂತಗೌಡ ಪಾಟೀಲ, ನಿಜಾಮ ಮುಲ್ಲಾ, ನಾನಾಗೌಡ ಪಾಟೀಲ, ಪ್ರಶಾಂತ ಅಲಗೊಂಡ, ರಾಹುಲ ಅಲಗೊಂಡ, ಶಂಕರಗೌಡ ಬಂಡಿ, ಶಂಕರಗೌಡ ಪಾಟೀಲ, ಆರ್.ಜಿ.ಬಂಡಿ, ಚನಬಸಪ್ಪ ತಾವರಖೇಡ, ಸಿದ್ದು ಅಲಗೊಂಡ, ಸಂಗಣ್ಣ ಇರಾಬಟ್ಟಿ, ನಿವೃತ್ತ ಶಿಕ್ಷಕ ಚನ್ನಬಸಪ್ಪ ತಾವರಖೇಡ, ಪ್ರಶಾಂತ ಅಲಗೊಂಡ, ರುದ್ರು ಅಲಗೊಂಡ, ಪುಂಡು ಹೂಗಾರ, ಪ್ರಭು ಬಬಲೇಶ್ವರ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 6 ಜೋಡಿಗಳು ನವ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟರು.