ಗದಗ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಚನ್ನವೀರಶರಣರ 30ನೇ ಪುಣ್ಯಸ್ಮರಣೋತ್ಸವ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ಜನ್ಮ ಹೊತ್ತು ಭೂಮಿಗೆ ಬಂದ ನಾವು ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಕಾರ್ಯ ಮಾಡಬೇಕು. ಸಮಾಜದಲ್ಲಿ ಸರ್ವರನ್ನೂ ಪ್ರೀತಿಸುವ ಸರ್ವರ ಬಗ್ಗೆ ಅಂತಃಕರಣ ಹೊಂದಿರಬೇಕು. ಸಮಾಜವೇ ನನ್ನ ಕುಟುಂಬ ಎಂದು ನಂಬಿ ಬಾಳಿದವರು ಶರಣರು. ಅವರ ನುಡಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕು, ತನ್ನನ್ನು ತಾನು ಅರಿತು ನಡೆಯುವುದೇ ಜೀವನದಲ್ಲಿ ಶ್ರೇಷ್ಠತೆ ಅಡಗಿದೆ ಎಂದರು.
ಮುದಗಲ್ಲ ಮಹಾಂತಸ್ವಾಮೀಜಿ ಮಾತನಾಡಿ, ವಿವಾಹ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾದ ದಂಪತಿಗಳು ಭಾಗ್ಯಶಾಲಿಗಳು. ಶರಣರ ಭಕ್ತಿ ಪರಂಪರೆ ಬೆಳೆಸಿಕೊಂಡು ಶರಣ ಧರ್ಮದ ಜೀವನ ನಿರ್ವಹಿಸಿ ದಾಂಪತ್ಯ ಧರ್ಮ ಪಾಲಿಸಲು ತಿಳಿಸಿದರು.ಇದೇ ಸಂದರ್ಭದಲ್ಲಿ ಅರಹುಣಸಿಯ ನಿವೃತ್ತ ಶಿಕ್ಷಕ ದಿ.ಕೆ.ಬಿ. ಕಂಬಳಿ ವಿರಚಿತ ಶ್ರೀ ಚನ್ನವೀರ ಶರಣರ ಲೀಲಾಮೃತ ಮೌನಯೋಗಿ 4ನೇ ಮುದ್ರಣ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಎಸ್.ವಿ. ಪಾಟೀಲ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹಿರೇಮಾಗಡಿಯ ಶಿವಮೂರ್ತಿ ಮುರಘರಾಜೇಂದ್ರ ಮಹಾಸ್ವಾಮಿಗಳು ಸನ್ನಿಧಾನ ವಹಿಸಿದ್ದರು. ಶಿವಪ್ರಕಾಶ ಶರಣರು ಶಿವಯೋಗಿ ದೇವರು ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರ ಜರುಗಿತು.
ಬೆಂಗಳೂರಿನ ಗೀತಾ ಭತ್ತದ ಹಾಗೂ ತಂಡದವರಿಂದ ಸಂಗೀತ ಸೇವೆ ಜರುಗಿತು. ಬಿ.ವೈ.ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಶಿವಲಿಂಗಶಾಸ್ತ್ರಿ ಸಿದ್ದಾಪುರ ಸ್ವಾಗತಿಸಿದರು. ಬೆಂಗಳೂರಿನ ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ ನಿರೂಪಿಸಿದರು. ಶಿವಶರಣಗೌಡ ಯರಡೋಣಿ ವಂದಿಸಿದರು. ಸಾಮೂಹಿಕ ವಿವಾಹದಲ್ಲಿ 39 ಜತೆ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.