ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುವ ಮಾಸಿಕ ಪಿಂಚಣಿ ಲಕ್ಷಾಂತರ ಫಲಾನುಭವಿಗಳ ಜೀವನಕ್ಕೆ ಆಧಾರವಾಗಿದೆ. ಇಂತಹ ಪಿಂಚಣಿಯನ್ನು ಸ್ಥಗಿತಗೊಳಿಸಿರುವುದು ಖಂಡನೀಯ.
ಧಾರವಾಡ:
ವೃದ್ಧರು, ವಿಧವೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿ ಸ್ಥಗಿತಗೊಳಿಸಿರುವ ಕ್ರಮ ಖಂಡಿಸಿ ಆ.31ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುವ ಮಾಸಿಕ ಪಿಂಚಣಿ ಲಕ್ಷಾಂತರ ಫಲಾನುಭವಿಗಳ ಜೀವನಕ್ಕೆ ಆಧಾರವಾಗಿದೆ. ಇಂತಹ ಪಿಂಚಣಿಯನ್ನು ಸ್ಥಗಿತಗೊಳಿಸಿರುವುದು ಖಂಡನೀಯ. ಮರುಪರಿಶೀಲನೆ ಹೆಸರಿನಲ್ಲಿ ಅರ್ಹ ಫಲಾನುಭವಿಗಳಿಗೆ ಅನಗತ್ಯ ತೊಂದರೆ ನೀಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹೋರಾಟ ನಡೆಸಲಾಗುವುದು ಎಂದರು.ಪಿಂಚಣಿ ಮರುಪರಿಶೀಲನೆ ಪ್ರಕ್ರಿಯೆಯನ್ನು ಸರಳಗೊಳಿಸಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಬೇಕು. ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಮರುಪರಿಶೀಲನೆಗೆ ಅಗತ್ಯವಿರುವ ದಾಖಲಾತಿಗಳ ಕುರಿತು ಪ್ರತಿಯೊಬ್ಬ ಫಲಾನುಭವಿಗೂ ಸ್ಪಷ್ಟ ಮಾಹಿತಿ ತಲುಪಿಸಬೇಕು ಎಂದು ಆಗ್ರಹಿಸಿದರು.ವಾರ್ಷಿಕ ₹32 ಸಾವಿರ ಆದಾಯ ಮಿತಿಯನ್ನು ಪಿಂಚಣಿ ಪಡೆಯಲು ಮಾನದಂಡವಾಗಿ ನಿಗದಿಪಡಿಸಿರುವುದನ್ನು ಬದಲಿಸಿ, ಈ ಹಿಂದಿನಂತೆಯೇ ಬಿಪಿಎಲ್ ಪಡಿತರ ಚೀಟಿಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಬೇಕು. ಬಡವರು, ವೃದ್ಧರು, ವಿಧವೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಪಿಂಚಣಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂದು ಹೇಳಿದರು.ಈಗಾಗಲೇ ಸ್ಥಗಿತಗೊಂಡಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ರಾಮಾಂಜನಪ್ಪ ಆಲ್ದಳ್ಳಿ ಒತ್ತಾಯಿಸಿದರು.ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಲಪಡಿಸುವ ಬದಲು ಫಲಾನುಭವಿಗಳನ್ನು ಹೊರಗಿಡುವ ಕ್ರಮವನ್ನು ಸರ್ಕಾರ ಕೈಬಿಡಬೇಕು. ಆ.31ರಂದು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಜಡ್ಡಗಣ್ಣವರ, ಗಂಗಾಧರ ಬಡಿಗೇರ, ಭುವನಾ ಬಳ್ಳಾರಿ, ಭವಾನಿ ಶಂಕರ್ ಗೌಡ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.