ಸಾಮೂಹಿಕ ಅರಿಶಿಣ ಕುಂಕುಮ, ರಕ್ಷಾಬಂಧನ ಕಾರ್ಯಕ್ರಮ

KannadaprabhaNewsNetwork |  
Published : Aug 12, 2025, 12:30 AM IST
ಫೋಟೋ ಆ.೧೧ ವೈ.ಎಲ್.ಪಿ. ೦೧  | Kannada Prabha

ಸಾರಾಂಶ

ಬುಡಕಟ್ಟು ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ವನವಾಸಿ ಕಲ್ಯಾಣದ ಕಾರ್ಯ ಶ್ಲಾಘನೀಯ

ಯಲ್ಲಾಪುರ: ಯಾವುದೇ ಸಮಾಜ ಮುಂದೆ ಬರಲು ಶಿಕ್ಷಣ ಮಹತ್ವದ ಕಾರ್ಯ ವಹಿಸುತ್ತದೆ. ಬುಡಕಟ್ಟು ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ವನವಾಸಿ ಕಲ್ಯಾಣದ ಕಾರ್ಯ ಶ್ಲಾಘನೀಯ. ಈ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಸಿದ್ಧನಾಗಿದ್ದೇನೆ ಎಂದು ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಹೇಳಿದರು.

ಪಟ್ಟಣದ ಕಾಳಮ್ಮ ದೇವಸ್ಥಾನದಲ್ಲಿ ವನವಾಸಿ ಕಲ್ಯಾಣ ಆಶ್ರಮದಿಂದ ಭಾನುವಾರ ಸಂಜೆ ಆಯೋಜಿಸಲಾದ ಸಾಮೂಹಿಕ ಅರಿಶಿಣ ಕುಂಕುಮ ಹಾಗೂ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಕೃತ ಉಪನ್ಯಾಸಕಿ ಧನ್ಯಶ್ರೀ ಭಟ್ಟ ರಕ್ಷಾ ಬಂಧನದ ಕುರಿತು ಉಪನ್ಯಾಸ ನೀಡಿ, ರಕ್ಷಾಬಂಧನವನ್ನು ನೋಡಿದಾಗ ನಮಗೆ ರಕ್ಷಣೆ ನೀಡುವವರಿದ್ದಾರೆ ಎಂಬ ಭಾವನೆ ನೀಡುವ ರಕ್ಷಣೆಯ ದಾರ. ಸಮಾಜದ ರಕ್ಷಣೆಯ ಭಾರ ನಮ್ಮ ಮೇಲಿದೆ ಎಂದು ನೆನಪಿಸುವ ದಾರ. ಶುದ್ಧವಾದ ಹತ್ತಿ ರೇಷ್ಮೆ ಬಂಗಾರಕ್ಕೆ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಅದಕ್ಕಾಗಿ ರೇಷ್ಮೆಯ ಎಳೆಗಳನ್ನು ಹತ್ತಿಯ ದಾರದಲ್ಲಿ ಬಂಧಿಸಿ ರಕ್ಷಾ ಬಂಧನ ಸಿದ್ಧಪಡಿಸಲಾಗುತ್ತದೆ. ರಕ್ಷೆ ಕಟ್ಟಿಕೊಂಡವರು ಕೆಟ್ಟ ಹವ್ಯಾಸಗಳಿಂದ, ಕೆಟ್ಟ ಜನರಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸುಚೇತಾ ಮದ್ಗುಣಿ ಅರಿಶಿಣ ಕುಂಕುಮದ ಮಹತ್ವ ವಿವರಿಸಿ, ಶ್ರಾವಣ ಮಾಸದಲ್ಲಿ ಮಹಿಳೆಯರನ್ನು ಸಂಘಟಿಸುವ ಉದ್ದೇಶದಿಂದ ಸಾಮೂಹಿಕ ಅರಿಶಿಣ ಕುಂಕುಮ ಆಯೋಜಿಸಲಾಗುತ್ತಿದೆ. ಅರಿಶಿಣ ರೋಗ ನಿರೋಧಕ ಮಾತ್ರವಲ್ಲದೇ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಅರಿಶಿಣ ಬಾಹ್ಯವಾಗಿ ಹಾಗೂ ಆಂತರಿಕವಾಗಿಯೂ ಸೇವಿಸುವುದರಿಂದ ದೇಹದಲ್ಲಿನ ಕಲ್ಮಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದರಂತೆ ಶುದ್ಧ ಕುಂಕುಮ ನಮ್ಮ ಹಣೆಯ ಮಧ್ಯಭಾಗದ ಆಜ್ಞಾಚಕ್ರವನ್ನು ಉತ್ತೇಜಿಸುವ ಕಾರ್ಯಮಾಡುತ್ತದೆ ಎಂದರು.

ಗೌರಿ ಭಟ್ಟ ಮಾತನಾಡಿ, ಬುಡಕಟ್ಟು ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕೆನ್ನುವುದು ವನವಾಸಿ ಕಲ್ಯಾಣ ಆಶ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿ ಸಂಸ್ಥೆಯ ಧ್ಯೆಯೋದ್ಧೇಶ ವಿವರಿಸಿದರು. ಸುಶೀಲಾ ಬಾಂದೇಕರ ರಕ್ಷಾ ಬಂಧನದ ಸಂದೇಶ ವಾಚಿಸಿದರು. ವಿನುತಾ ಕೋಟೆಮನೆ, ನಾಗವೇಣಿ ಭಟ್ಟ ಸಂಗಡಿಗರು ಭಗವದ್ಗೀತಾ ಶ್ಲೋಕ ಪಠಿಸಿದರು. ಉಮಾ ಯಲ್ಲಾಪುರಕರ ಸ್ವಾಗತಿಸಿದರು. ನಿಧಿ ಮೋರಸ್ಕರ ನಿರ್ವಹಿಸಿದರು. ವನ್ನು ಪೋಂಡೆ ವಂದಿಸಿದರು.

PREV

Recommended Stories

ಯಾವಾಗ ಬೇಕಿದ್ದರೂ ಸಂಪುಟ ಪುನರ್‌ ರಚನೆ : ಗುಂಡೂರಾವ್‌
9 ತಿಂಗಳಲ್ಲಿ 158 ಕಾರ್ಖಾನೆಗಳ ಮುಚ್ಚಲು ಮಂಡಳಿಯ ನೋಟಿಸ್‌