ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತಗಳ್ಳತನದ ವಿರುದ್ಧ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಂಡಿದ್ದಾರೆ. ನ.8ಕ್ಕೆ ಈ ಹೋರಾಟಕ್ಕೆ ಒಂದು ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಮತ್ತಷ್ಟು ಹೋರಾಟ, ಅಭಿಯಾನವನ್ನು, ಸಹಿ ಸಂಗ್ರಹ ವಿಸ್ತರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಸಹಿ ಸಂಗ್ರಹವಾಗಿದ್ದು, ಇದು ನ.8ರಂದು 1.40 ಲಕ್ಷ ತಲುಪಲಿದೆ. ಜಿಲ್ಲೆಯಲ್ಲಿ ಈ ಅಭಿಯಾನ ಮುಂದುವರೆಯಲಿದ್ದು, ನ.11 ರಂದು ರಾಜ್ಯಾದ್ಯಂತ ಮುಂದುವರೆಯುತ್ತದೆ. ರಾಜ್ಯದಲ್ಲಿ ಈಗಾಗಲೇ 1 ಕೋಟಿಗೂ ಹೆಚ್ಚು ಸಹಿ ಸಂಗ್ರಹ ಆಗಿದೆ. ಈ ಎಲ್ಲ ಸಹಿ ಸಂಗ್ರಹದ ವಿವರಗಳನ್ನು ರಾಷ್ಟ್ರಪತಿಗಳಿಗೆ ನೀಡಿ ಮತಗಳ್ಳತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.ಇಡೀ ದೇಶದಲ್ಲಿ ಮತಗಳ್ಳತನ ಮೂಲಕ ಪ್ರಜಾಪ್ರಭುತ್ವವೇ ಕಗ್ಗೊಲೆಯಾಗುತ್ತಿದೆ. ನಮ್ಮ ಮತವನ್ನು ನಾವೇ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಮತಗಳ್ಳತನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ಕೊಡಬೇಕು. ಆದರೆ, ಚುನಾವಣಾ ಆಯೋಗವೇ ಕೇಂದ್ರದ ಜತೆ ಶಾಮೀಲಾಗಿದೆ. ಕಳ್ಳನ ಕೈಗೆ ಬೀಗ ಕೊಟ್ಟ ಹಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ದೇವಿಕುಮಾರ್, ಲಕ್ಷ್ಮಿಕಾಂತ್ ಚಿಮಣೂರು ಇದ್ದರು.
ಶಿವಮೊಗ್ಗ: ನವೆಂಬರ್ ಕ್ರಾಂತಿ ಬಗ್ಗೆ ಸಿಎಂ -ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಭಂಡಾರಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಬಯಸೋದು ಪ್ರತಿಯೊಬ್ಬ ಕಾರ್ಯಕರ್ತನ ಹಕ್ಕು. ಕಾರ್ಯಕರ್ತ, ಶಾಸಕ ಯಾರೇ ಇರಬಹುದು.ಯಾವಾಗ ಯಾರಿಗೆ ಅಧಿಕಾರ ಕೊಡಬೇಕು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯಮಟ್ಟದಲ್ಲಿ ಈಗಾಗಲೇ ಹಲವರಿಗೆ ಅಧಿಕಾರ ಕೊಡಲಾಗಿದೆ. ವಿವಿಧ ನಿಗಮಮಂಡಳಿಗಳಿಗೆ ಅಧ್ಯಕ್ಷರ ನೇಮಕವಾಗಿದೆ. ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನಿಗಮ ಮಂಡಳಿ ಸ್ಥಾನ ಮಾನ ನೀಡಲಾಗುವುದು ಎಂದರು.
ರಾಷ್ಟ್ರಗೀತೆ ಕುರಿತು ಕಾಗೇರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾವತ್ತು ಸಂವಿಧಾನವನ್ನ ಒಪ್ಪಿಕೊಂಡಿಲ್ಲ. ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನ ಒಪ್ಪಿಕೊಂಡಿಲ್ಲ. ಏನಾದ್ರೂ ಹೇಳಬೇಕು ಅನ್ನೋ ಕಾರಣಕ್ಕೆ ರಾಷ್ಟ್ರಗೀತೆ ಬಗ್ಗೆ ಹೇಳಿದ್ದಾರೆ. ವಂದೇ ಮಾತರಂ, ಜನಗಣಮನ ಬಗ್ಗೆ ಇವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.