ಕನ್ನಡಪ್ರಭ ವಾರ್ತೆ ಮಂಡ್ಯ
ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ರೈತಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ತಿಳಿಸಿದೆ. ಆರು ತಿಂಗಳೊಳಗೆ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ನೀಡುವಂತೆ ಕೇಳಿದೆ. ಹಾಗಾಗಿ ನಿಮ್ಮೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದೇವೆ. ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು ಎಂದು ಗೊತ್ತಾಗಿದೆ.ಇದಕ್ಕೆ ರೈತ ಮುಖಂಡ ಪ್ರಸನ್ನ ಎನ್.ಗೌಡ ಪ್ರತಿಕ್ರಿಯಿಸಿ, ಕೃಷ್ಣರಾಜಸಾಗರ ಜಲಾಶಯದ ಉತ್ತರದಾಯಿತ್ವವನ್ನು ರೈತ ಸಂಘದವರು ಮಾತ್ರ ತೆಗೆದುಕೊಂಡಿಲ್ಲ. ಜಿಲ್ಲೆಯ ಏಳು ಶಾಸಕರು, ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಅವರನ್ನೂ ಸಭೆಗೆ ಕರೆಯಿರಿ. ಅವರ ಅಭಿಪ್ರಾಯ ಏನೆಂಬುದನ್ನೂ ತಿಳಿದುಕೊಳ್ಳೋಣ. ಯಾರು ಪ್ರಾಯೋಗಿಕ ಸ್ಫೋಟದ ಪರವಾಗಿದ್ದಾರೆ. ಯಾರು ವಿರೋಧವಾಗಿದ್ದಾರೆ. ಅಣೆಕಟ್ಟು ಸುರಕ್ಷತೆ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎನ್ನುವುದು ಜನರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾಗಿ ತಿಳಿದುಬಂದಿದೆ.
ಜಿಲ್ಲಾಡಳಿತ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ (ಸಿಎಸ್ಐಆರ್) ತಂಡದಿಂದ ಪರೀಕ್ಷಾರ್ಥ ಸ್ಫೋಟ ನಡೆಸುವುದಾಗಿ ಹೇಳುತ್ತಿದೆ. ಆದರೆ, ಪರೀಕ್ಷಾರ್ಥ ಸ್ಫೋಟಕ್ಕೆ ಅನುಸರಿಸುತ್ತಿರುವ ಮಾನದಂಡವೇನು. ಎಷ್ಟು ಅಡಿ ಆಳದಲ್ಲಿ ಸ್ಫೋಟ ನಡೆಸಲಾಗುತ್ತದೆ. ಒಮ್ಮೆ ಸಣ್ಣ ಪ್ರಮಾಣದಲ್ಲಿ ಸ್ಫೋಟ ನಡೆಸಿ ವರದಿ ಪಡೆದುಕೊಂಡು ಹೈಕೋರ್ಟ್‌ಗೆ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆಯುವ ಸಂಚು ಅಡಗಿದೆಯಾ ಎಂದು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಗಣಿಧಣಿಗಳಿಗೆ ಮಣಿದಿರುವಂತೆ ಕಂಡುಬರುತ್ತಿದೆ. ಜನಪ್ರತಿನಿಧಿಗಳ ಸಭೆ ಕರೆಯದಿರುವುದನ್ನು ನೋಡಿದರೆ ಅವರೂ ಪರೋಕ್ಷವಾಗಿ ಟ್ರಯಲ್ ಬ್ಲಾಸ್ಟ್ ಬೆಂಬಲಕ್ಕೆ ನಿಂತಿರುವಂತೆ ಕಂಡುಬರುತ್ತಿದೆ. ನೂರು ವರ್ಷ ಹಳೆಯದಾಗಿರುವ ಅಣೆಕಟ್ಟೆಯನ್ನು ಸಂರಕ್ಷಣೆ ಮಾಡುವ ಇಚ್ಛಾಶಕ್ತಿಯನ್ನು ಪ್ರದರ್ಶಿಸದೆ ಪರೀಕ್ಷಾರ್ಥ ಸ್ಫೋಟಕ್ಕೆ ಸಜ್ಜಾಗುತ್ತಿರುವುದು ದೊಡ್ಡ ದುರಂತ ಎಂದು ಹೇಳಿದರು ಎನ್ನಲಾಗಿದೆ.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ರೈತಸಂಘದ ಲಿಂಗಪ್ಪಾಜಿ, ಕೆನ್ನಾಳು ನಾಗರಾಜು, ಹುಳ್ಳೇನಹಳ್ಳಿ ರಾಣಿ, ಬೊಮ್ಮೇಗೌಡ, ಶಿವರಾಮೇಗೌಡ, ಮಂಜುನಾಥ್, ಕೃಷ್ಣ ಸೇರಿದಂತೆ ಇತರರಿದ್ದರು.
ಕೆಆರ್‌ಎಸ್ ಅಣೆಕಟ್ಟು ಸುತ್ತಲಿನ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವುದಕ್ಕೆ ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ವಕೀಲರ ಮೂಲಕ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿರುವ ಅವರು, ಬೇಬಿ ಬೆಟ್ಟ ಸರ್ವೆ ನಂ.1ರಲ್ಲಿರುವ 1623 ಎಕರೆ 7 ಗುಂಟೆ ಆಸ್ತಿ ಮೈಸೂರು ಮಹಾರಾಜರಿಗೆ ಸೇರಿದ ಖಾಸಗಿ ಆಸ್ತಿ. ಈ ಸಂಬಂಧ ಹೈಕೋರ್ಟ್‌ನಲ್ಲಿ ಮೊಕದ್ದಮೆಯನ್ನೂ ಹೂಡಲಾಗಿದೆ. ನನಗೆ ಸೇರಿದ ಖಾಸಗಿ ಆಸ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ನನ್ನ ವಿರೋಧವಿದೆ. ಜೊತೆಗೆ ಇದು ಸುಪ್ರೀಂ ಕೋರ್ಟ್ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಕೆಆರ್‌ಎಸ್ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸದಂತೆ ಮನವಿಯಲ್ಲಿ ತಿಳಿಸಿದ್ದಾರೆ.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ