ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ನಾಳೆ ಬೃಹತ್ ಪಾದಯಾತ್ರೆ

KannadaprabhaNewsNetwork |  
Published : Jul 16, 2026, 02:30 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಲಗೋಡು ಗ್ರಾಮದಲ್ಲಿ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ನಡೆಯುವ ಪಾದಯಾತ್ರೆಯ ಹೋರಾಟ ಕುರಿತು ಜಿ.ಪಂ. ಮಾಜಿ ಸದಸ್ಯ ಅಕ್ಕಿ ತೋಟೇಶ್ ಸಾರ್ವಜನಿಕರಿಗೆ ಬುಧವಾರ ಕರಪತ್ರಗಳನ್ನು ವಿತರಿಸಿದರು. | Kannada Prabha

ಸಾರಾಂಶ

ತಂಬ್ರಹಳ್ಳಿ ಹೋಬಳಿ ಭಾಗದ ರಸ್ತೆಗಳ ದುರಸ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜು.16ರಂದು ತಂಬ್ರಹಳ್ಳಿಯಿಂದ ಹಗರಿಬೊಮ್ಮನಹಳ್ಳಿ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಹೋಬಳಿ ಭಾಗದ ರಸ್ತೆಗಳ ದುರಸ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜು.16ರಂದು ತಂಬ್ರಹಳ್ಳಿಯಿಂದ ಹಗರಿಬೊಮ್ಮನಹಳ್ಳಿ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಪ್ರಕಟಿಸಿದರು.ತಾಲೂಕಿನ ಚಿಲಗೋಡು ಗ್ರಾಮದಲ್ಲಿ ಪಾದಯಾತ್ರೆಯ ಹೋರಾಟ ಕುರಿತು ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕುರಿತಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ರಸ್ತೆಗಳಿಗೆ ರಿಪೇರಿಯ ಭಾಗ್ಯವಿಲ್ಲದೇ ಪ್ರಯಾಣಿಕರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ತಂಬ್ರಹಳ್ಳಿಯಿಂದ ಹಗರಿಬೊಮ್ಮನಹಳ್ಳಿ ವರೆಗಿನ ೧೭ಕಿಮೀ ರಸ್ತೆ ಸೇರಿದಂತೆ ಹಗರಿಕ್ಯಾದಿಗಿಹಳ್ಳಿ –ಉಪ್ಪಿನಾಯಕನಹಳ್ಳಿ (೧೦ಕಿಮೀ) ಮತ್ತು ತಂಬ್ರಹಳ್ಳಿ – ಜಿ. ಕೋಡಿಹಳ್ಳಿ(೯ಕಿಮೀ) ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ವಾಹನಗಳು ನಿರಂತರ ದುರಸ್ತಿಗೆ ಬರುತ್ತಿವೆ. ಪ್ರಯಾಣಿಕರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ ಎಂದು ಕಿಡಿ ಕಾರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವಾರು ಬಾರಿ ಲೋಕೋಪಯೋಗಿ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ನೀಡಿರುವ ಮನವಿಗಳು ಕಸದ ಬುಟ್ಟಿಯ ಪಾಲಾಗಿವೆ. ಈವರೆಗೂ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಗ್ರಾಮದ ಕೊಟ್ಟೂರೇಶ್ವರ ದೇಗುಲದಿಂದ ಬೆಳಗ್ಗೆ 6.3ಕ್ಕೆಕ್ಕೆ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ. ಪಾದಯಾತ್ರೆ ಯಾವುದೇ ರಾಜಕೀಯ ದುರುದ್ದೇಶಕ್ಕಾಗಿ ಹಮ್ಮಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಾದಯಾತ್ರೆಯ ಬಳಿಕ ತಹಸೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗುತ್ತದೆ. ತಂಬ್ರಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರು, ರೈತರು, ಯುವಕರು ಮತ್ತು ವಿಶೇಷವಾಗಿ ವಾಹನ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.

ತಾಪಂ ಮಾಜಿ ಸದಸ್ಯ ಪಿ. ಕೊಟ್ರೇಶ್, ಗೌರಜ್ಜನವರ ಮಲ್ಲಿಕಾರ್ಜುನ, ಕಾಶೀಂಪೀರ್, ಏಣಗಿ ರಾಮಣ್ಣ, ಏಣಗಿ ರವಿ, ಬೆಟಗೇರಿ ನಿಂಗಪ್ಪ, ಕ್ಯಾದಿಗಿಹಳ್ಳಿ ನಿಂಗರಾಜ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಿಗೆ ಕುಲಪತಿ ಗದ್ದುಗೆ ಕನಸು!
ಬೆಳೆ ವಿಮೆ ಗೊಂದಲ ಬಗೆಹರಿಸಿ, ಹಾವೇರಿ ಜಿಲ್ಲೆ ಬರಪೀಡಿತವೆಂದು ಘೋಷಿಸಲು ಆಗ್ರಹ