ಚಾಕು ಇರಿದು ಪತಿ ಹತ್ಯೆಗೈದ ವೈದ್ಯೆ?

KannadaprabhaNewsNetwork |  
Published : Jul 16, 2026, 02:30 AM ISTUpdated : Jul 16, 2026, 05:31 AM IST
Dharwad

ಸಾರಾಂಶ

ಡಾ. ಕಿರಣ ಕುತ್ತಿಗೆ ಭಾಗಕ್ಕೆ ಚಾಕು ಇರಿದಿದ್ದು ಬೆಡ್‌ರೂಮ್‌ ಗಾದಿಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಮೃಹದೇಹ ಪತ್ತೆಯಾಗಿದೆ. ಮತ್ತೊಂದು ರೂಮ್‌ನಲ್ಲಿದ್ದ 10 ವರ್ಷದ ಪುತ್ರನನ್ನು ಸಹ ಕೊಲೆ ಮಾಡಲು ಡಾ. ಪ್ರಿಯಾ ಪ್ರಯತ್ನಿಸಿದ್ದಾಳೆಂದು ತಿಳಿದು ಬಂದಿದೆ.

ಧಾರವಾಡ :  ಕೌಟುಂಬಿಕ ಕಲಹದಿಂದ ವೈದ್ಯರೋರ್ವರನ್ನು ಚಾಕುವಿನಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜತೆಗೆ 10 ವರ್ಷದ ಮಗನನ್ನು ಕೊಲೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸಕಾಲಕ್ಕೆ ಪೊಲೀಸರು ಆಗಮಿಸಿದ್ದರಿಂದ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದೆ.

ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿದ್ದ, ಕರ್ನಾಟಕ ವಿವಿ ರಸ್ತೆಯ ಬಾರಾಕೊಟ್ರಿ ರಂಕಾ ಸ್ಟೆಲ್ಲೋ ಅಪಾರ್ಟ್‌ಮೆಂಟ್‌ ನಿವಾಸಿ ಡಾ. ಕಿರಣ ಹೊನ್ನಣ್ಣವರ (45) ತನ್ನ ಪತ್ನಿ, ನೇತ್ರ ತಜ್ಞೆ ಡಾ. ಪ್ರಿಯಾಳಿಂದ (40) ಮೃತಪಟ್ಟ ದುರ್ದೈವಿ. ಗಾಯಗೊಂಡಿರುವ ನಿಯತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾ. ಕಿರಣ ಕುತ್ತಿಗೆ ಭಾಗಕ್ಕೆ ಚಾಕು ಇರಿದಿದ್ದು ಬೆಡ್‌ರೂಮ್‌ ಗಾದಿಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಮೃಹದೇಹ ಪತ್ತೆಯಾಗಿದೆ. ಮತ್ತೊಂದು ರೂಮ್‌ನಲ್ಲಿದ್ದ 10 ವರ್ಷದ ಪುತ್ರನನ್ನು ಸಹ ಕೊಲೆ ಮಾಡಲು ಡಾ. ಪ್ರಿಯಾ ಪ್ರಯತ್ನಿಸಿದ್ದಾಳೆಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು, ಗಾಯಗೊಂಡಿದ್ದ ಪುತ್ರ ನಿಯತ್‌ನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಕೌಟುಂಬಿಕ ಸಮಸ್ಯೆಯಿಂದ ಈ ಘಟನೆ ಆಗಿರಬಹುದೆಂಬ ಶಂಕೆ ಇದೆ. ಮಂಗಳವಾರ ಸಂಜೆಯಿಂದಲೇ ಡಾ. ಕಿರಣಗೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಡಾ. ಪ್ರಿಯಾ ಸ್ವೀಕರಿಸಿದ್ದು, ಕೊಲೆ ಮಂಗಳವಾರ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ತೀವ್ರ ಆಘಾತದಲ್ಲಿರುವ ಡಾ. ಪ್ರಿಯಾ ಹಾಗೂ ಪುತ್ರನನ್ನು ನಂತರದಲ್ಲಿ ವಿಚಾರಣೆ ಮಾಡಿದಾಗ ಘಟನೆಯ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ.

ಮೊಬೈಲ್‌ ನೋಡುತ್ತಾ ಕುಳಿತಿದ್ದ ಪ್ರಿಯಾ!

ಒಂದೆಡೆ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಪತಿ. ಮತ್ತೊಂದೆಡೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ನೋಡದೇ ಕುಳಿತಿರುವ ತಾಯಿ. ಮತ್ತೊಂದು ಕಡೆ ಸಹೋದರರನ್ನು ಕಳೆದುಕೊಂಡು ರೋದಿಸುತ್ತಿರುವ ಸಹೋದರಿಯರು.

ಈ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಧಾರವಾಡದ ಪ್ರತಿಷ್ಠಿತ ರಂಕಾ ಸ್ಟೆಲ್ಲೋ ಅಪಾರ್ಟ್‌ಮೆಂಟ್. ಡಾ. ಕಿರಣ ಹೊನ್ನಣ್ಣನವರ ಹಾಗೂ ಡಾ. ಪ್ರಿಯಾ ಇಬ್ಬರು ಶ್ರೀಮಂತರೇ. ಆದರೆ, ಇವರ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಆದರೆ, ಇದು ಕೊಲೆಯ ಹಂತಕ್ಕೆ ಬರುತ್ತದೆ ಎಂದು ತಿಳಿದಿರಲಿಲ್ಲವಂತೆ. ಪತಿಯ ಕುತ್ತಿಗೆ ಎರಡು ಬದಿಗೆ ಚಾಕುವಿನಿಂದ ಇರಿದಿದ್ದು ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದರೂ, ಅತ್ತ ಮಗು ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಡಾ. ಪ್ರಿಯಾ ಮಂಚದ ಮೇಲೆ ಮೊಬೈಲ್ ನೋಡುತ್ತಾ ಕುಳಿತಿರುವುದು ಎಲ್ಲರಲ್ಲಿ ದಿಗ್ಭ್ರಮೆ ಮೂಡಿಸಿದೆ. 

ಪತ್ತೆಯಾಗಿದ್ದು ಹೇಗೆ:

ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳದ ಡಾ. ಕಿರಣ ಹಾಗೂ ವಿಜಯಪುರ ಜಿಲ್ಲೆಯ ಡಾ. ಪ್ರಿಯಾಗೆ 10 ವರ್ಷದ ನಿಹಿತ್‌ ಎಂಬ ಮಗನಿದ್ದಾನೆ. ಡಾ. ಕಿರಣಗೆ ನಿರಂತರವಾಗಿ ಕರೆ ಮಾಡಿದರೂ ಸ್ವೀಕರಿಸದೆ ಇರುವುದರಿಂದ ಅನುಮಾನಗೊಂಡ ಕುಟುಂಬಸ್ಥರು ಮಗನ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಬಳಿಕ ಮಗನನ್ನು ಕರೆದರು ಬಾಗಿಲು ತೆರದಿಲ್ಲ. ಹಲವು ಕದ ತಟ್ಟಿದ್ದಾರೆ. ಆದರೂ ಸಹ ಬಾಗಿಲನ್ನು ತೆರದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ತಟ್ಟಿದಾಗ ಡಾ. ಪ್ರಿಯಾ ತೆರದಿದ್ದಾಳೆ. ಒಳ ಹೋಗಿ ನೋಡಿದರೆ ರಕ್ತಸಿಕ್ತ ಕಲೆಗಳನ್ನು ನೋಡಿ ಪೊಲೀಸರು ಬೆಡ್‌ರೂಮ್‌ ನೋಡಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೊಲೆ ಡಾ. ಪ್ರಿಯಾ ಮಾಡಿದ್ದಾಳೆಂದು ಕಿರಣ ಕುಟುಂಬಸ್ಥರು ಆರೋಪಿಸಿದ್ದಾರೆ. 

ವಿಚಿತ್ರ ವರ್ತನೆ:

ಡಾ. ಪ್ರಿಯಾ ಅವರನ್ನು ಪೊಲೀಸರು ವಿಚಾರಿಸಿದಾಗ ವಿಚಿತ್ರವಾಗಿ ವರ್ತಿಸಿದ್ದಾಳೆ. ಈ ಘಟನೆ ಬಳಿಕ ತಾನೂ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಲು ಯತ್ನಿಸಿರುವ ಬಗ್ಗೆಯೂ ಕುರುಹುಗಳು ಪತ್ತೆಯಾಗಿವೆ. ಇನ್ನು ಮನೆಯ ಬಹುತೇಕ ಕಡೆಗಳಲ್ಲಿ ಬಳೆಗಳು ಒಡೆದು ಬಿದ್ದಿರುವುದು ಪತ್ತೆಯಾಗಿದೆ. ಪತಿ-ಪತ್ನಿ ನಡುವೆ ಸಂಘರ್ಷ ನಡೆದಿತ್ತಾ ಎನ್ನುವ ಅನುಮಾನವೂ ಇದಕ್ಕೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬರಗಾಲ ಘೋಷಿಸಿ ರೈತರಿಗೆ ಪರಿಹಾರ ನೀಡಿ
ಕಡ್ಲೇವಾಡ ಕೆರೆಗೆ ನೀರು ಹರಿಸಲು ಆಗ್ರಹ