ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ರಾಜ್ಯಪಾಲರು ಅಧಿಕಾರ ದುರುಪಯೋಗ : ಕಾಂಗ್ರೆಸ್‌ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Aug 19, 2024, 12:54 AM ISTUpdated : Aug 19, 2024, 05:10 AM IST
18ಕೆಎಂಎನ್ ಡಿ11 | Kannada Prabha

ಸಾರಾಂಶ

ರಾಜ್ಯದಲ್ಲಿ ಜನಾಭಿಪ್ರಾಯದೊಂದಿಗೆ ಬಹುಮತ ಸರ್ಕಾರ ಸ್ಥಾಪನೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಂದಾದ ಮೇಲೊಂದರಂತೆ ಇಲ್ಲಿಯವರೆವಿಗೂ ಷಡ್ಯಂತ್ರವನ್ನು ಎನ್‌ಡಿಎ ಮಿತ್ರಕೂಡ ನಡೆಸಿಕೊಂಡು ಬರುತ್ತಿದೆ.

 ಮಳವಳ್ಳಿ :  ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ರಾಜ್ಯಪಾಲರು ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯ್ತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅನಂತ್‌ ರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ರಾಜ್ಯಪಾಲರು, ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಕೆಲವು ಕಾರ್ಯಕರ್ತರು ಉರುಳು ಸೇವೆ ಮಾಡಿ ಖಂಡಿಸಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜನಾಭಿಪ್ರಾಯದೊಂದಿಗೆ ಬಹುಮತ ಸರ್ಕಾರ ಸ್ಥಾಪನೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಂದಾದ ಮೇಲೊಂದರಂತೆ ಇಲ್ಲಿಯವರೆವಿಗೂ ಷಡ್ಯಂತ್ರವನ್ನು ಎನ್‌ಡಿಎ ಮಿತ್ರಕೂಡ ನಡೆಸಿಕೊಂಡು ಬರುತ್ತಿದೆ ಎಂದು ದೂರಿದರು.

ಕೇಂದ್ರದಲ್ಲಿ ನೂತನ ಎನ್‌ಡಿಎ ಸರ್ಕಾರ ಅಸ್ಥಿತ್ವ ಬಂದ ಮೇಲೆ ರಾಷ್ಟ್ರದ ಕಾಂಗ್ರೆಸ್ ಬೆಳವಣಿಗೆ, ರಾಹುಲ್‌ಗಾಂಧಿ ನಾಯಕತ್ವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜನಪರ ಆಡಳಿತ ಸಹಿಸಿಕೊಳ್ಳಲಾಗದೇ ಮೂಡ ನಿವೇಶನ ಹಂಚಿಕೆ ಸಂಬಂಧ ಯಾವದೇ ಪಾತ್ರವೂ ಇಲ್ಲದ ಸಿದ್ದರಾಮಯ್ಯರವರ ಮೇಲೆ ಸುಪ್ರಿಂಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡು ದಂಡವಿಧಿಸಿದ ವ್ಯಕ್ತಿಯ ಮನವಿಯನ್ನು ಪುರಸ್ಕರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ ಎಂದರು.

ಕುಮಾರಸ್ವಾಮಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸೋಕೆ ಅನುಮತಿ ಕೇಳಿ ಎಂಟು ತಿಂಗಳು ಕಳೆಯುತ್ತಿದೆ. ಮಹಾನ್ ಇಂಡಸ್ಟ್ರಿಯಲಿಸ್ಟ್ ನಿರಾಣೆ ಅವರದು 108 ಹಗರಣವಿದೆ. ಶಶಿಕಲಾ ಜೊಲ್ಲೆ ಅವರ ಮೇಲೆಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿದ್ದರೇ ತಕ್ಕ ಶಿಕ್ಷೆಯಾಗಲಿ. ನಾವು ಸಹ ಅದಕ್ಕೆ ಸಹಮತ ವ್ಯಕ್ತಪಡಿಸುತ್ತೇವೆ. ಆದರೆ, ಅವರ ಆಡಳಿತದಲ್ಲಿ ಯಾವುದೇ ಲೋಪವೂ ಇಲ್ಲದೇ ಸಹಿಯೂ ಮಾಡದೇ ಆಡಳಿತದ ವೇಳೆ ಸಹಭಾಗಿತ್ವವನ್ನು ವಹಿಸದೇ ಸ್ವಜನ ಪಕ್ಷಪಾತವನ್ನು ರಾಜಕೀಯ ಜೀವನದಲ್ಲಿ ಮಾಡದ ವ್ಯಕ್ತಿಯ ಮೇಲೆ ಕ್ಷುಲ್ಲಕ ಆರೋಪವನ್ನು ತಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತರಲು ಹುನ್ನಾರಕ್ಕೆ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊಡಬೇಕಾಗಿದ್ದ ತೆರಿಗೆ ಪಾಲನ್ನು ನೀಡದೇ ವಂಚಿಸುತ್ತಿದೆ, ವಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ಸ್ವಾತಂತ್ರ್ಯ ದಿನಾಚರಣೆ ವೇಳೆ ಕೊನೆ ಆಸನದಲ್ಲಿ ಕೂರಿಸುವ ಮೂಲಕ ಅವಮಾನ ವೆಸೆಗಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅತ್ಯಂತ ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಕೈಗೊಂಬೆಯಾಗಿರುವ ರಾಜ್ಯಪಾಲರ ನಡೆ ಸರಿಯಲ್ಲ. ಇದಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಸುವ ದೃಷ್ಟಿಯಿಂದ ಉದ್ದೇಶ ಪೂರ್ವಕವಾಗಿ ತನಿಖೆಗೆ ಆದೇಶ ನೀಡುವ ಮೂಲಕ ರಾಜ್ಯಪಾಲರು ಸಂವಿಧಾನದ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಅನಂತ್ ರಾಂ ವೃತ್ತದ ಬಳಿ ಜಮಾಯಿಸಿ ರಾಜ್ಯಪಾಲರ, ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲೂಕು ಕಚೇರಿಗೆ ಶಾಸಕರ ನೇತೃತ್ವದಲ್ಲಿ ತೆರಳಿ ತಹಸೀಲ್ದಾರ್ ಕೆ.ಎನ್.ಲೋಕೇಶ್ ಅವರ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಎಂ.ಆರ್.ರಾಜಶೇಖರ್, ಪ್ರಮೀಳಾ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಸುರೇಶ್, ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ, ಪ್ರಮುಖರಾದ ಆರ್.ಎನ್.ವಿಶ್ವಾಸ್, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು, ಸಿ.ಮಾಧು, ವಕೀಲರಾದ ಡಿ.ಎಂ ಸುಂದರ್, ಜಗದೀಶ್ ಕೆ.ಜೆ.ದೇವರಾಜು, ಎಚ್.ಬಿ.ಬಸವೇಶ್, ಮುಟ್ಟನಹಳ್ಳಿ ಅಂಬರೀಶ್, ಸವಿತಾ, ಎಚ್.ಕೆ.ಕೃಷ್ಣಮೂರ್ತಿ, ಶಿವಮೂರ್ತಿ, ಕಿರಣ್ ಶಂಕರ್, ಕೆ.ಶ್ರೀನಿವಾಸ್, ಬಂಕ್ ಮಹದೇವು, ದಿಲೀಪ್ ಕುಮಾರ್(ವಿಶ್ವ), ಟಿ.ಎಂ.ಪ್ರಕಾಶ್, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು-ಹೈದ್ರಾಬಾದ್‌ ಹೈಸ್ಪೀಡ್‌ ರೈಲಿಗೆ ಒಪ್ಪಿಗೆ?
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’