371ಜೆ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Aug 01, 2025, 02:15 AM IST
ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ನಗರದಲ್ಲಿ ರೈತ ಭಾರತ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಳೆದ ಹತ್ತು ವರ್ಷದಿಂದ ಅನ್ಯಾಯ ಸಹಿಸಿಕೊಂಡಿರುವ ನಮ್ಮ ವಿಜಯಪುರ ಜಿಲ್ಲೆಯ ಯುವ ಜನಾಂಗ ಹೋರಾಟದಲ್ಲಿ ಭಾಗವಹಿಸಿ ನಮ್ಮ ಪಾಲಿನ ಹಕ್ಕನ್ನು ಪಡೆಯಲು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಗೆ 371ಜೆ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ನಗರದಲ್ಲಿ ರೈತ ಭಾರತ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್‌ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು, ಕರ್ನಾಟಕ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಜಿಲ್ಲೆಗೆ ಅನ್ಯಾಯ ಮಾಡಿದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಮೊಳಗಿದವು.

ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಮಾತನಾಡಿ, ಕಳೆದ 90ರ ದಶಕದಲ್ಲಿ ವಿಜಯಪುರ ಜಿಲ್ಲೆ ಸೇರಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಕಲಂ 371ಜೆ ವಿಶೇಷ ಮೀಸಲಾತಿ ನೀಡಬೇಕೆಂದು ಜಿಲ್ಲೆಯ ಹಿರಿಯರು, ಜನ, ಸಂಘ ಸಂಸ್ಥೆಗಳು ನಿರಂತರ ಹೋರಾಟ ಮಾಡುತ್ತ ಬಂದಿದ್ದರು. 2014ರಲ್ಲಿ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ನೀಡದೆ ವಂಚಿಸಿದವು. ಇದರಿಂದ ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ 371ಜೆ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ನವಸ್ಫೂರ್ತಿ ಸಂಘದ ಅಧ್ಯಕ್ಷ ಶಬ್ಬೀರ್ ಅವರು ಮಾತನಾಡಿ, ಕಳೆದ ಹತ್ತು ವರ್ಷದಿಂದ ಅನ್ಯಾಯ ಸಹಿಸಿಕೊಂಡಿರುವ ನಮ್ಮ ವಿಜಯಪುರ ಜಿಲ್ಲೆಯ ಯುವ ಜನಾಂಗ ಹೋರಾಟದಲ್ಲಿ ಭಾಗವಹಿಸಿ ನಮ್ಮ ಪಾಲಿನ ಹಕ್ಕನ್ನು ಪಡೆಯಲು ಮುಂದಾಗಬೇಕು ಎಂದರು.

ಈ ವೇಳೆ ಪಕ್ಷದ ಮುಖಂಡರಾದ ಅಂಬಾಜಿ ನಾರಾಯಣಕರ, ಸಿದ್ದಪ್ಪ ನಾಟಿಕಾರ, ನವಸ್ಫೂರ್ತಿ ಸಂಘದ ಗುಲಾಬ ರಾಠೋಡ, ಪ್ರಾರ್ಥನಾ ಅಂಬಿ, ಈರಣ್ಣ ಲಗಳಿ, ನಾಗಮ್ಮ ದಲಾಲ, ದಾವಲಸಾಬ ಕೊರಬು ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಜಿಲ್ಲೆಯ ಜನರ ಮುಗ್ದತೆಯನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಜನರನ್ನು ನಿರಂತರವಾಗಿ ಅಭಿವೃದ್ಧಿಯಿಂದ ವಂಚಿಸುತ್ತಾ ಬಂದಿವೆ. ವಿಜಯಪುರ ಜಿಲ್ಲೆಯನ್ನು 371ಜೆ ಮೀಸಲಾತಿಯಿಂದ ಕೈಬ್ಬಿಟ್ಟಿದ್ದರಿಂದ ಜಿಲ್ಲೆಯ ಮಕ್ಕಳು ಉನ್ನತ ಶಿಕ್ಷಣದ ಹಾಗೂ ಯುವಕ- ಯುವತಿಯರು ಸರಕಾರಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಜಿಲ್ಲೆಯ ಜನಪ್ರತಿನಿಧಿಗಳು ಕೂಡಲೇ ಜಿಲ್ಲೆಗೆ ಮೀಸಲಾತಿ ಒದಗಿಸಿ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ