ಭೂ ಗುತ್ತಿಗೆ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Jan 18, 2025 12:45 AM

ಸಾರಾಂಶ

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ । ರಸ್ತೆ ತಡೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ವಸತಿ ಮತ್ತು ಭೂಮಿಗಾಗಿ ನಿವೇಶನ ಭೂರಹಿತರಿಂದ ಮತ್ತು ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತಿಭಟನಾ ಮೆರವಣಿಗೆಯಲ್ಲಿ ವಸತಿ, ಭೂಮಿ ಹಾಗೂ ಒತ್ತುವರಿಯಾಗಿರುವ ಭೂಮಿ ಬಡವರಿಗೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹ ವ್ಯಕ್ತಪಡಿಸಿದರು. ಒತ್ತುವರಿದಾರರಿಗೆ ಭೂಮಿ ಗುತ್ತಿಗೆ ನೀಡಲು ಹೊರಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಭೂಗುತ್ತಿಗೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಭೂಮಾಲೀಕರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಪ್ಲಾಂಟೇಷನ್ ಭೂಮಿಯನ್ನು ಮತ್ತೆ ಭೂಮಾಲೀಕರಿಗೆ, ಉಳ್ಳವರಿಗೆ, 25 ಎಕರೆ ವರೆಗೆ 30 ವರ್ಷದ ಅವಧಿಗೆ ವರ್ಷಕ್ಕೆ ಎಕರೆಗೆ ಒಂದು ಸಾವಿರ (1000) ದಂತೆ ಗುತ್ತಿಗೆ ನೀಡಲು ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿತ್ತು. ನಂತರ ಬಂದ ಬಡವರ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಬಂದು ತರಾತುರಿಯಲ್ಲಿ ಕಂದಾಯ ಕಾನೂನಿಗೆ ತಿದ್ದುಪಡಿ ತಂದು ಕಾಲಂ 94(ಇ)ಯನ್ನು ಹೊಸದಾಗಿ ಸೇರಿಸಿ ಪ್ಲಾಂಟೇಷನ್ ಮಾಲೀಕರಿಗೆ ಅನುಕೂಲ ಆಗುವಂತೆ ಕಾಯ್ದೆಯನ್ನು ಜಾರಿಗೆ ತಂದಿದೆ. ಬಿಜೆಪಿಯವರು ತಂದ ಉಳ್ಳವರ ಪರವಾದ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೆ ತರುವ ಮೂಲಕ ಈ ಸರ್ಕಾರ ಕೂಡ ಉಳ್ಳವರ ಪರವೆಂಬುವುದನ್ನು ಸಾಬೀತು ಮಾಡಿದೆ ಎಂದು ಆರೋಪಿಸಿದರು.ಸಂಪದ್ಬರಿತ ಕೊಡಗು ಜಿಲ್ಲೆಯಲ್ಲಿ ದಲಿತರು, ಆದಿವಾಸಿಗಳು, ಬಡವರು ಸ್ವಂತ ತುಂಡು ಭೂಮಿ ಇಲ್ಲದೆ, ಸ್ವಂತ ಸೂರಿಲ್ಲದೆ ಉಳ್ಳವರ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆಯವರ ಕಿರುಕುಳ, ಉಳ್ಳವರ ದೌರ್ಜನ್ಯ, ದಬ್ಬಾಳಿಕೆಗಳಿಂದ ಭಯಬೀತರಾಗಿ ಪ್ಲಾಸ್ಟಿಕ್ ಶೆಡ್‌ಗಳಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದಾರೆ. ಆದರೆ ನಾವು ಬಡವರ ಪರ, ಸಂವಿಧಾನದ ಪರ ಎಂದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೂಡ ಬಡ ದಲಿತ, ಆದಿವಾಸಿಗಳಿಗೆ ಭೂಮಿ, ನಿವೇಶನ ನೀಡದೆ ಉಳ್ಳವರಿಗೆ ಮತ್ತಷ್ಟು ಭೂಮಿಯನ್ನು ನೀಡುತ್ತಿದೆ. ಇದನ್ನು ಸರ್ಕಾರ ಕೈಬಿಟ್ಟು ಉಳ್ಳವರ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಬಡವರಿಗೆ ಕನಿಷ್ಟ 3 ಎಕರೆ ಕೃಷಿ ಭೂಮಿ, ಸೂರಿಲ್ಲದವರಿಗೆ ಸ್ವಂತ ಸೂರು ನೀಡಬೇಕೆಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳು:

ಸರ್ಕಾರ ಜಾರಿಗೆ ತಂದಿರುವ ಭೂ ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಜಿಲ್ಲೆಯ ದೊಡ್ಡ ಭೂ ಮಾಲೀಕರು, ಕಾರ್ಪೊರೇಟ್ ಶಕ್ತಿಗಳು ಅನಧಿಕೃತವಾಗಿ ಆಕ್ರಮಿಸಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು. ಜಿಲ್ಲೆಯ ಎಲ್ಲ ದಲಿತ, ಆದಿವಾಸಿ, ಭೂಹೀನ ಕೃಷಿ ಕಾರ್ಮಿಕರಿಗೆ ಭೂಮಿ ಮತ್ತು ನಿವೇಶನ ಹಂಚಿಕೆಯಾಗಬೇಕು. ಈಗಾಗಲೇ ಅಕ್ರಮ ಸಕ್ರಮದ ಅಡಿಯಲ್ಲಿ 57-94ಸಿ ನಲ್ಲಿ ಸಲ್ಲಿಸಿರುವ ಬಡವರ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಬೇಕು. ಆದಿವಾಸಿ ಅರಣ್ಯ ಹಕ್ಕು ಕಾಯ್ದೆ 2006 ಸಮರ್ಪಕವಾಗಿ ಜಾರಿಯಾಗಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡವರ ನಿವೇಶನಕ್ಕೆ ಅಂಗನವಾಡಿ ಸಮುದಾಯ ಭವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಜಾಗ ಕಾಯ್ದಿರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭೂಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಕೆ. ಮೊಣ್ಣಪ್ಪ, ಸಂಚಾಲಕರ ರಮೇಶ್, ಸಣ್ಣಪ್ಪ, ಗೋವಿಂದಪ್ಪ, ಕಾರ್ಮಿಕ ಮುಖಂಡ ಭರತ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್, ವಿಭಾಗೀಯ ಸಂಚಾಲಕ ವೀರಭದ್ರಯ್ಯ, ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ, ಸಿಪಿಐ ಜಿಲ್ಲಾಧ್ಯಕ್ಷ ಸುನಿಲ್ ಮತ್ತಿತರರು ಪಾಲ್ಗೊಂಡಿದ್ದರು.

Share this article