ಕಸ್ತೂರಿ ರಂಗನ್ ವರದಿ ಕೈಬಿಡಲು ಆಗ್ರಹಿಸಿ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Sep 07, 2026, 01:15 AM IST
 | Kannada Prabha

ಸಾರಾಂಶ

ಕೊಪ್ಪಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರಿಗೆ ಮಾರಕ ಎಂಬುದು ಗೊತ್ತಿದ್ದರೂ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ವರದಿ ಮಾರಕವೆಂದು ತಿಳಿದರೂ ಜಾರಿ ಮುಂದಾಗಿರುವುದು ಖಂಡನೀಯ: ಶಾಸಕ ಟಿ.ಡಿ. ರಾಜೇಗೌಡಕನ್ನಡಪ್ರಭ ವಾರ್ತೆ ಕೊಪ್ಪ

ಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರಿಗೆ ಮಾರಕ ಎಂಬುದು ಗೊತ್ತಿದ್ದರೂ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ನಿಂದ ಭಾನುವಾರ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಇದನ್ನು ಜಾರಿಗೊಳಿಸಲು ಬಿಡುವುದಿಲ್ಲ. ಈ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಭರವಸೆ ನೀಡಿದ್ದಾರೆ ಎಂದರು.ಕೇಂದ್ರ ಸರ್ಕಾರದ ಹಲವು ನೀತಿಗಳು ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಿದ ಅವರು, ಮಲೆನಾಡಿನ ಜನರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಪಕ್ಷ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.ಇದೇ ವೇಳೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಂಡು ರಸ್ತೆಗಳ ಸಮಸ್ಯೆ ಸರಿಪಡಿಸಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದರು.ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿ.ಎಸ್. ವಿಶ್ವನಾಥ್ ಶೆಟ್ಟಿ, ಕಸ್ತೂರಿ ರಂಗನ್ ವರದಿ ಮಲೆನಾಡಿನ ನಿವಾಸಿಗಳ ಪಾಲಿಗೆ ಬಹುದೊಡ್ಡ ಶಾಪ. ವರದಿಯಿಂದ ಮಲೆನಾಡಿನ ಜನರು ಎದುರಿಸಬಹುದಾದ ಸಮಸ್ಯೆ ಕುರಿತು ಸರ್ಕಾರಗಳು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹೇಳಿದರು.ಡಾ. ಅಂಶುಮಂತ್ ಅವರು ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಜನರು ಹಾಗೂ ರೈತರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, “ಕಸ್ತೂರಿ ರಂಗನ್ ವರದಿ ಕಾಂಗ್ರೆಸ್ ಸರ್ಕಾರದ ಕೂಸು” ಎಂದು ಬಿಜೆಪಿ ಮುಖಂಡರು ತಿಳುವಳಿಕೆಯಿಲ್ಲದೆ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಬಿಜೆಪಿ ಸಂಸದರು ಕೇಂದ್ರ ಸರ್ಕಾರ ದೊಂದಿಗೆ ಮಾತನಾಡಿ ವರದಿಯಿಂದ ಮಲೆನಾಡಿನ ಜನರಿಗೆ ಆಗಬಹುದಾದ ತೊಂದರೆಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಕೊಪ್ಪ ಪುರಭವನದಿಂದ ಆರಂಭಗೊಂಡು ಬಸ್ ನಿಲ್ದಾಣದವರೆಗೆ ಸಾಗಿತು.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ