ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jul 15, 2026, 02:15 AM IST
ಹಾವೇರಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ, ರೈತರ ಜ್ವಲಂತ ಸಮಸ್ಯೆಗಳು, ಜನಸಾಮಾನ್ಯರ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಜಿಲ್ಲೆಯಲ್ಲಿ ಮಿತಿಮೀರಿದ ಅಕ್ರಮ ಜೂಜಾಟ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಜು.16ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಹಾವೇರಿ: ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ, ರೈತರ ಜ್ವಲಂತ ಸಮಸ್ಯೆಗಳು, ಜನಸಾಮಾನ್ಯರ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಜಿಲ್ಲೆಯಲ್ಲಿ ಮಿತಿಮೀರಿದ ಅಕ್ರಮ ಜೂಜಾಟ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಜು.16ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಉತ್ತಮ ಆಡಳಿತ ನಡೆಸುವಲ್ಲಿ ಜಿಲ್ಲಾಡಳಿತ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿದರು.

ಜಿಲ್ಲೆಯ ನರೇಗಲ್‌ನಲ್ಲಿ ಕಾರ ಹುಣ್ಣಿಮೆ ಹಬ್ಬದ ವೇಳೆ ಗಲಾಟೆ ಸೃಷ್ಟಿಸಿ ಹಿಂದೂಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ರಟ್ಟಿಹಳ್ಳಿಯಲ್ಲೂ ಕೂಡ ಗೂಡಂಗಡಿ ವ್ಯಾಪಾರಿ ಮೇಲೆ ಹಲ್ಲೆಗೈದು ಹತ್ಯೆ ಮಾಡಲಾಗಿದೆ. ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದೆ. ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ಗೋಸ್ಕರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ನಾಲ್ಕು ಜಿಲ್ಲೆಗೊಬ್ಬರು ಸಚಿವರನ್ನು ನೇಮಿಸಿ ಸರ್ಕಾರ ಕೈತೊಳೆದುಕೊಂಡಿದೆ. ನೆಪ ಮಾತ್ರಕ್ಕೆ ಸಭೆ ನಡೆಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೋದರು. ಮಳೆ ಇಲ್ಲದೆ ಅನ್ನದಾತ ಸಂಕಷ್ಟದಲ್ಲಿದ್ದು, ರೈತರು ಗೋಳು ಹೇಳಿಕೊಳ್ಳಲು ಕೃಷಿ ಮಂತ್ರಿಗಳೇ ಇಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಅಕ್ರಮ ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿದೆ. ಭ್ರಷ್ಟಾಚಾರ ಮೀತಿಮೀರಿದ್ದು, ಸರ್ಕಾರ ದಿನಬೆಳಗಾದರೆ ಹಗರಣದಲ್ಲಿ ತೇಲಾಡುತ್ತಿದೆ. ಕಣ್ಣು ಕಿವಿ ಇಲ್ಲದ ಸರ್ಕಾರ ಪಂಚ ಗ್ಯಾರಂಟಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಇಂತಹ ದಬ್ಬಾಳಿಕೆ, ವೈಫಲ್ಯಗಳನ್ನು ಖಂಡಿಸಿ ಜು.16ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಮಾರು ಏಳೆಂಟು ಸಾವಿರ ಜನ ಸೇರಲಿದ್ದು, ಪುರಸಿದ್ದೇಶ್ವರ ದೇವಸ್ಥಾನದಿಂದ ಎಂ.ಜಿ. ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಿಂದೂಗಳು ಕಾರ ಹುಣ್ಣಿಮೆ ಆಚರಣೆ ಮಾಡುವಾಗ ಹಲ್ಲೆ ಮಾಡುತ್ತಾರೆಂದರೆ, ಕೋಮುಸೌಹಾರ್ದತೆ ಯಾವ ಮಟ್ಟದಲ್ಲಿದೆ ಎಂಬುದನ್ನು ನೋಡಬೇಕಿದೆ. ಇದು ವೈಯಕ್ತಿಕ ಗಲಾಟೆಯಲ್ಲ, ದುರುದ್ದೇಶಪೂರ್ವಕ ಹಾಗೂ ಪೂರ್ವನಿಯೋಜಿತ ಕೃತ್ಯವೆಸಗಿದ್ದಾರೆ. ತುಷ್ಟೀಕರಣ ರಾಜಕಾರಣ ನಡೆಸುತ್ತಿರುವ ಇಂತಹ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮುಖಂಡರಾದ ಭೋಜರಾಜ ಕರೂದಿ ಮಾತನಾಡಿ, ಕೆಪಿಎಸ್ಸಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆದ್ದರಿಂದ ಕೆಪಿಎಸ್ಸಿ ಅನ್ನು ತೆಗೆದುಹಾಕುವುದೇ ಉತ್ತಮ ಎಂದು ಹೇಳಿದರು. ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಕಿರಣ ಕೊಳ್ಳಿ, ಸಿದ್ದಣ್ಣ ಚಿಕ್ಕಬಿದರಿ, ನೀಲಪ್ಪ ಚಾವಡಿ, ನಂಜುಂಡೇಶ ಕಳ್ಳೇರ, ನಿರಂಜನ ಹೇರೂರ, ಸಂತೋಷ ಆಲದಕಟ್ಟಿ, ವಿಜಯಕುಮಾರ ಚಿನ್ನಿಕಟ್ಟಿ, ಸತೀಶ ಹಂಚಿನಮನಿ ಇತರರು ಇದ್ದರು.

ರಾಣಿಬೆನ್ನೂರು ಹಾಗೂ ಬಂಕಾಪುರದಲ್ಲಿ ಎಸ್‌ಐಆರ್ ಫಾರ್ಮ ಅಕ್ರಮವಾಗಿ ಭರ್ತಿ ಮಾಡಿದ್ದರ ಕುರಿತು ದೂರು ನೀಡಲಾಗಿದೆ. ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ಹಾಗೂ ಅನರ್ಹ ಮತದಾರರ ವೀಕ್ಷಣೆಗೆ ಜಿಲ್ಲೆಯಲ್ಲಿ 1480 ಬಿಎಲ್‌ಎಗಳನ್ನು ನೇಮಕ ಮಾಡಲಾಗಿದೆ. ಅದೇರೀತಿ ಗ್ರಾಪಂ ಚುನಾವಣೆ ಮೀಸಲು ಪ್ರಕಟಿಸಿದ್ದನ್ನು ಪುನರ್ ಪರಿಶೀಲಿಸುವಂತೆ ಡಿಸಿ, ಸಿಇಒಗಳಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು: ಶಾಸಕ ಮಾನೆ
ನಗರದ ರಸ್ತೆ ಅಗೆದಿರುವುದಕ್ಕೆ ನಗರಾಭಿವೃದ್ಧಿ ಕೋಶಕ್ಕೆ ಸಿಎಂ ಸಚಿವಾಲಯದಿಂದ ಪತ್ರ