ಬಾಲ್ಯವಿವಾಹ ಮುಕ್ತ ಜಿಲ್ಲೆಗಾಗಿ ಬೃಹತ್ ವಾಕಥಾನ್

KannadaprabhaNewsNetwork |  
Published : May 24, 2025, 12:29 AM IST
23ಸಿಎಚ್‌ಎನ್‌52ಚಾಮರಾಜೇಶ್ವರ ದೇವಾಲಯದಿಂದ ಆರಂಭವಾದ ಬೃಹತ್ ಜನಜಾಗೃತಿ ವಾಕಥಾನ್‌ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೇರಿದಂತೆ ಎಲ್ಲಾ ಗಣ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸಾಹದಿಂದ ಸಾಗಿದರು. | Kannada Prabha

ಸಾರಾಂಶ

ಚಾಮರಾಜೇಶ್ವರ ದೇವಾಲಯದಿಂದ ಆರಂಭವಾದ ಬೃಹತ್ ಜನಜಾಗೃತಿ ವಾಕಥಾನ್‌ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೇರಿದಂತೆ ಎಲ್ಲ ಗಣ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸಾಹದಿಂದ ಸಾಗಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪದೊಂದಿಗೆ ನಗರದಲ್ಲಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ವಾಕಥಾನ್, ಪ್ರತಿಜ್ಞಾ ಸ್ವೀಕಾರ ಸೇರಿದಂತೆ ಬೃಹತ್ ಜನಜಾಗೃತಿ ಜಾಥಾ ಪಟ್ಟಣದ ನಾಗರಿಕರ ಗಮನ ಸೆಳೆಯಿತು. ನಗರದ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ ಬೃಹತ್ ವಾಕಥಾನ್‌ನಲ್ಲಿ ಭಾಗವಹಿಸಲು ಸಮಾವೇಶಗೊಂಡಿದ್ದ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಶುಕ್ರವಾರದ ಕವಾಯತು ಮುಗಿಸಿ ವಾಕಥಾನ್ ಸೇರಿಕೊಂಡ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲೆಯವರೇ ಆದ ಕಿರುತೆರೆ ಹಾಗೂ ಚಿತ್ರನಟ ಗಣೇಶ್ ರಾವ್ ಮತ್ತು ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಚೈತ್ರಾ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ವಾಕಥಾನ್‌ಗೆ ವಿಶೇಷ ಮೆರಗು ತಂದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರು ಹಸಿರು ನಿಶಾನೆ ತೋರಿದರು.ಇದೇ ವೇಳೆ ವಾಕಥಾನ್ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆಶಯದಂತೆ ಚಾಮರಾಜನಗರವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ನಗರದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ವಾಕಥಾನ್ ಆಯೋಜಿತವಾಗಿದೆ. ಮಾರ್ಚ್-8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಿಂದ ನ.14ರ ಮಕ್ಕಳ ದಿನಾಚರಣೆವರೆಗಿನ ಅವಧಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ, ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು, ಉಪವಿಭಾಗ ಹಾಗೂ ಜಿಲ್ಲಾಮಟ್ಟದಲ್ಲಿ ವಿಶೇಷ ಗಮನ ಸೆಳೆಯುವಂತಹ ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಗೊಳಿಸುವ ಸದುದ್ದೇಶ ಹೊಂದಲಾಗಿದೆ ಎಂದರು.

ಬಾಲ್ಯವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 18ವರ್ಷ ತುಂಬಿರದ ಹೆಣ್ಣು ಮಕ್ಕಳು ವಿವಾಹವಾಗಬಾರದು. ಬಾಲ್ಯವಿವಾಹದಿಂದ ಹಲವಾರು ಸಮಸ್ಯೆಗಳು ಎದುರಾಗಲಿವೆ. ಮಕ್ಕಳ ಆರೋಗ್ಯ, ಶಿಕ್ಷಣ ಕುಂಠಿತವಾಗಲಿದೆ. ಸಂತೋಷದಿಂದ ಕಳೆಯಬೇಕಾದ ಬಾಲ್ಯವನ್ನು ಮಕ್ಕಳಿಂದ ಬಲವಂತವಾಗಿ ಕಸಿದಂತಾಗಲಿದೆ. ಕುಟುಂಬ, ಜನರ ಆರ್ಥಿಕ ಹಿನ್ನೆಡೆ ಮತ್ತು ಸೋಷಿಯಲ್ ಮೊಬಿಲಿಟಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ಬಾಲ್ಯವಿವಾಹ ನಡೆದ ಮೇಲೆ ಶಿಕ್ಷೆ ಕೊಡಿಸುವುದಕ್ಕಿಂತ ಮಕ್ಕಳ ತಂದೆ-ತಾಯಿ, ಪೋಷಕರಿಗೆ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಿ ಬಾಲ್ಯವಿವಾಹ ತಡೆಯುವುದೇ ಉತ್ತಮವಾಗಿದೆ. ಜನರ ಮನ ಪರಿವರ್ತನೆ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಗ್ರಾಪಂಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು ಆಗಬೇಕು. ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆ ಸರ್ಕಾರದ, ಅಧಿಕಾರಿಗಳ, ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಅದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಬಾಲ್ಯವಿವಾಹ ತಡೆಗೆ ಎಲ್ಲರೂ ಪಣತೊಡಬೇಕು. ಜಿಲ್ಲೆಯ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಿ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವನ್ನಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಸಾಮಾಜಿಕ ಅನಿಷ್ಠ ಪದ್ಧತಿಯಾಗಿರುವ ಬಾಲ್ಯವಿವಾಹವನ್ನು ಬೇರುಸಮೇತ ಕಿತ್ತೊಗೆಯಲು ತಳಮಟ್ಟದ ಅಧಿಕಾರಿಗಳಿಂದ ನಿರಂತರ ಪ್ರಯತ್ನಗಳಾಗಬೇಕಿದೆ. ಬಾಲ್ಯವಿವಾಹ ತಡೆಗೆ ಚಾಮರಾಜನಗರದಲ್ಲಿ ವಿಶಿಷ್ಟವಾಗಿ ಗಮನ ಸೆಳೆಯುವ ಬೃಹತ್ ವಾಕಥಾನ್ ಆಯೋಜನೆ ದೇಶ, ರಾಜ್ಯದಲ್ಲಿಯೇ ಪ್ರಥಮವಾಗಿದೆ. ಈ ಕಾರ್ಯಕ್ರಮ ಎಲ್ಲ ಜನರನ್ನು ತಲುಪಬೇಕು. ವಿಶೇಷವಾಗಿ ಇಡೀ ದೇಶಕ್ಕೆ ಉತ್ತಮ ಸಂದೇಶ ತಲುಪಬೇಕು. ಆಗಮಾತ್ರ ಇದು ಸಾರ್ಥಕವಾಗಲಿದೆ ಎಂದರು.ಎಸ್ಪಿ ಡಾ.ಕವಿತಾ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ. ಖುಷಿಯಿಂದ ಕಳೆಯಬೇಕಾದ ಬಾಲ್ಯವನ್ನು ಮಕ್ಕಳಿಂದ ಬಲವಂತವಾಗಿ ಕಿತ್ತುಕೊಳ್ಳದೇ ಅವರನ್ನು ಮುಂದಿನ ಭವಿಷ್ಯದ ಜೀವನಕ್ಕೆ ಸಿದ್ದಪಡಿಸಬೇಕಾದ ಜವಾಬ್ದಾರಿ ಪೋಷಕರಿಗೆ ಇದೆ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳಿಂದ ಅಹವಾಲು ಸ್ವೀಕರಿಸಲು ಆಪ್ತಗೆಳತಿ ದೂರುಪೆಟ್ಟಿಗೆಗಳನ್ನು ಇಡಲಾಗಿದ್ದು, ಬಾಲ್ಯವಿವಾಹ ತಡೆಗೂ ಇದು ನೆರವಾಗಲಿದೆ. ಆಪ್ತಗೆಳತಿ ದೂರುಪೆಟ್ಟಿಗೆಗಳ ಮೂಲಕ 2024ರ ನವೆಂಬರ್‌ನಿಂದ ಇದುವರೆಗೆ ಸ್ವೀಕರಿಸಲಾದ 315 ದೂರುಗಳನ್ನು ಸೂಕ್ತವಾಗಿ ಇತ್ಯರ್ಥಪಡಿಸಲಾಗಿದೆ ಎಂದರು.

ಇದೇ ವೇಳೆ ಜಿಪಂ ಸಿಇಒ ಮೋನಾರೋತ್ ಬಾಲ್ಯವಿವಾಹ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ, ವಾಕಥಾನ್‌ಗೆ ಶುಭ ಹಾರೈಸಿದರು. ಚಾಮರಾಜೇಶ್ವರ ದೇವಾಲಯದಿಂದ ಆರಂಭವಾದ ಬೃಹತ್ ಜನಜಾಗೃತಿ ವಾಕಥಾನ್‌ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೇರಿದಂತೆ ಎಲ್ಲಾ ಗಣ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸಾಹದಿಂದ ಸಾಗಿದರು. ಬಳಿಕ ನಗರದ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಾಲ್ಯವಿವಾಹ ನಿರ್ಮೂಲನೆಯ ಘೋಷವಾಕ್ಯಗಳನ್ನು ಮೊಳಗಿಸಿ ಜಾಗೃತಿ ಮೂಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ವಾಕಥಾನ್ ಮುಕ್ತಾಯಗೊಂಡಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ