ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಅಂಚೆ ಇಲಾಖೆ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಹೊರತಂದಿದ್ದು, ಇನ್ನು ಮುಂದೆ ಮಲೆನಾಡಿನ ಕಾಫಿ ತೋಟಗಳ ಸೊಬಗು ಅಂಚೆ ಇಲಾಖೆ ಮೊಹರಿನಲ್ಲಿ ವಿಜೃಂಭಿಸಲಿದೆ.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇಲಾಖೆ ವಿಭಾಗೀಯ ಅಂಚೆ ಅಧೀಕ್ಷಕ ಎನ್.ಬಿ. ಶ್ರೀನಾಥ್ ಜಿಲ್ಲೆಯ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆ ಬಿಡುಗಡೆಗೊಳಿಸಿದರು.ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದಿನಿಂದ ತಮ್ಮ ಪತ್ರಗಳಿಗೆ ಕಾಫಿ ತೋಟದ ಚಿತ್ರಣವಿರುವ ವಿಶೇಷ ಮೊಹರನ್ನು ಹಾಕಿಸಿಕೊಳ್ಳಬಹುದು ಎಂದು ಹೇಳಿದರು.ಕಳೆದ 40 ವರ್ಷಗಳ ಹಿಂದೆ ಶೃಂಗೇರಿ ಶ್ರೀ ವಿದ್ಯಾಶಂಕರ ದೇವಾಲಯದ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಅಂಚೆ ಇಲಾಖೆ ಹೊರ ತಂದಿತ್ತು. ಇದೀಗ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮೊಹರನ್ನು ಹೊರತರುವ ಮೂಲಕ ಅಂಚೆ ಇಲಾಖೆ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ಮಾತನಾಡಿ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತನ್ನದೇ ಆದ ವಿಶೇಷ ಅಂಚೆ ಮೊಹರನ್ನು ಹೊಂದಿರುವುದು ಹೆಮ್ಮೆಯ ಸಂಗತಿ ಎಂದರು.ಸಹಾಯಕ ಅಂಚೆ ಪಾಲಕ ಎ.ಎಸ್. ಮುರಳೀಧರ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಎರಡನೇ ವಿಶೇಷ ಅಂಚೆ ಮೊಹರು ಬಿಡುಗಡೆಗೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಧಾನ ಅಂಚೆ ಪಾಲಕ ಸುನಿಲ್ ವಾಸ್, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಚಿಕ್ಕಮಗಳೂರು ಉಪ ವಿಭಾಗದ ಅಂಚೆ ನಿರೀಕ್ಷಕ ಡಿ.ಎನ್. ಗಂಗಾಧರಪ್ಪ, ಮೂಡಿಗೆರೆ ಅಂಚೆ ನಿರೀಕ್ಷಕ ಷಣ್ಮುಖ ಎಚ್. ಚವಾಣ್, ಕೊಪ್ಪ ಅಂಚೆ ನಿರೀಕ್ಷಕ ಹರಿಪ್ರಸಾದ್‌ರಾವ್, ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಗಣೇಶ್ ನಾಯಕ್, ಅಂಚೆ ಮಾರುಕಟ್ಟೆ ಅಧಿಕಾರಿ ದೊಡ್ದೇಶ್, ಶಶಿರೇಖ, ಬಿ.ಎನ್. ಪ್ರದೀಪ್, ಕಾವ್ಯಶ್ರೀ ಉಪಸ್ಥಿತರಿದ್ದರು.23 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇಲಾಖೆ ವಿಭಾಗೀಯ ಅಂಚೆ ಅಧೀಕ್ಷಕ ಎನ್.ಬಿ. ಶ್ರೀನಾಥ್ ಜಿಲ್ಲೆಯ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆ ಬಿಡುಗಡೆಗೊಳಿಸಿದರು.