ಹೊನ್ನಾವರ: ತಾಲೂಕಿನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘವು ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿ, ಇಡೀ ರಾಮಕ್ಷತ್ರೀಯ ಸಮಾಜದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.ಇದೇ ವೇಳೆ ವೇದಿಕೆಯಲ್ಲಿ ರಾಮಕ್ಷತ್ರಿಯ ಸಮಾಜದ ಎಲ್ಲ ಊರಿನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲರ ಪರವಾಗಿ ಮೋಹನ್ ಸಾಲೆಹಿತ್ತಲ ಮಾತನಾಡಿದರು. ಪ್ರಧಾನ ಸರಕಾರಿ ಅಭಿಯೋಜಕರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದ ತನುಜಾ ಬಾಬುರಾವ ಹೊಸಪಟ್ಟಣಕರ, ರಾಮಕ್ಷತ್ರೀಯ ಸಮಾಜದವರು ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರತಿಯೊಂದು ಸಮಾಜವೂ ಸಂಘಟಿತವಾಗಿ ಹೋರಾಡುತ್ತಿದೆ. ಆದರೆ ಈ ವಿಚಾರದಲ್ಲಿ ರಾಮಕ್ಷತ್ರೀಯ ಸಮಾಜ ತುಂಬ ಹಿಂದುಳಿದಿತ್ತು. ಇದೀಗ ಸಂಘಟಿತರಾಗುವ ಕಾಲ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ರಾಮಕ್ಷತ್ರೀಯ ಸಮಾಜದ ಸೇವೆ ಅಗಣಿತವಾದದ್ದು. ನಿಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಶಾಸಕ ದಿನಕರ ಶೆಟ್ಟಿ ಅವರನ್ನು ರಾಮಕ್ಷತ್ರಿಯ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್‌ನ ಅಧ್ಯಕ್ಷ ಎಸ್.ಕೆ. ನಾಯ್ಕ, ಈ ಅದ್ಧೂರಿ ಕಾರ್ಯಕ್ರಮ ಆಯೋಜಿಸಿರುವ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘದ ಸಂಘಟಕರ ಕಾರ್ಯವನ್ನು ಪ್ರಶಂಸಿಸಿದರು.
ಸಂಘಟಕರಾದ ವಿನೋದ್ ನಾಯ್ಕ, ನಮ್ಮ ರಾಮಕ್ಷತ್ರೀಯ ಸಮಾಜ ಮುಂದಿನ ದಿನಗಳಲ್ಲಿ ಮಾದರಿ ಸಮಾಜವಾಗಿ ನಿರ್ಮಾಣವಾಗಬೇಕು ಎಂದು ಹೇಳಿದರು. ನಿವೃತ್ತ ಶಿಕ್ಷಕ ಚಂದಾವರ ಆನಂದ್ ವೈ ನಾಯ್ಕ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ, ಸಂಘಟಕರಲ್ಲೊಬ್ಬರಾದ ಕವನ್ ಕುಮಾರ್, ರಾಮಕ್ಷತ್ರಿಯ ಸಮುದಾಯದವರನ್ನು ಕೇಂದ್ರದ ಒಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯ ಸಿಗ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಈ ವೇದಿಕೆಯನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದರು.
ಕವನ್ ಕುಮಾರ್ ಅವರನ್ನು ರಾಮಕ್ಷತ್ರಿಯ ಸಂಘದ ವತಿಯಿಂದ ಶಾಸಕ ದಿನಕರ ಶೆಟ್ಟಿ ಅವರಿಂದ ಸನ್ಮಾನಿಸಿ ಗೌರವಿಸಲಾಯಿತು.ರೋಚಕವಾಗಿ ನಡೆದ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರ 30ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡು ಸೆಣಸಾಟ ನಡೆಸಿದವು. ಮಂಕಿಪುರದ ಶ್ರೀ ಮಂಜುನಾಥ ತಂಡ ಮಹಿಳೆಯರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಪುರುಷರ ವಿಭಾಗದಲ್ಲಿ ಮಾವಿನಹೊಳೆ ತಂಡ ಮಿರ್ಜಾನ್ ತಂಡವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.