ಅಂಬೇಡ್ಕರ್ ವಿಚಾರಧಾರೆಗಳು ಯುವಕರಿಗೆ ಪ್ರೇರಣೆ ಆಗಲಿ

KannadaprabhaNewsNetwork |  
Published : May 20, 2025, 01:10 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಯಕ್ರಮದಲ್ಲಿ ಬುದ್ದ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪನವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಮಿತಿ ಉದ್ಘಾಟನೆ ನೆರವೇರಿಸಲಿಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಂಬೇಡ್ಕರ್ ವಿಚಾರಧಾರೆಗಳು ವಿದ್ಯಾರ್ಥಿ, ಯುವಜನರಿಗೆ ಪ್ರೇರಣೆ ಆಗಬೇಕೆಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ ತಿಪ್ಪೇರುದ್ರಸ್ವಾಮಿ ಹೇಳಿದರು.

ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಯಕ್ರಮದಲ್ಲಿ ಬುದ್ದ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪನವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದ್ದರೆ ಶೋಷಿತ ಸಮುದಾಯಗಳು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದವು. ಸಂವಿಧಾನ ಬದಲಾಯಿಸುವ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳಾಗುತ್ತಿದ್ದು ಯುವಕರು ಜಾಗರೂಕರಾಗಿರಬೇಕೆಂದರು.ಮೊದಲಿನಿಂದಲೂ ಚಿತ್ರದುರ್ಗದ ನೆಲ ಹೋರಾಟಗಳಿಗೆ ಗುರುತಿಸಿಕೊಂಡಿದೆ. ಇಲ್ಲಿಂದಲೇ ಅನೇಕ ಸಂಘಟನೆ, ಚಳುವಳಿ, ಆರಂಭವಾಗಿವೆ. ಎಲ್ಲ ಹೋರಾಟಗಳಿಗೆ ಈ ನೆಲ ಬೆಂಬಲವಾಗಿ ನಿಂತಿದೆ. ಯುವ ಜನಾಂಗಕ್ಕೆ ಹುರುಪು ತುಂಬಬೇಕಿದೆ. ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಬುದ್ದನ ಕಾಲದಿಂದಲೂ ಇದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಹಾಗೂ ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪನವರ ಹಾದಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಎಲ್ಲಾ ವರ್ಗದವರನ್ನು ಇದರಲ್ಲಿ ಸೇರಿಸಿಕೊಂಡಿರುವುದು ಅರ್ಥಪೂರ್ಣ. ರಾಜ್ಯದ ಅನೇಕ ಭಾಗಗಳಲ್ಲಿ ಸಂಘಟನೆಗಳು ಹುಟ್ಟಿಕೊಂಡು ಕೆಲವೇ ದಿನಗಳಲ್ಲಿ ನಶಿಸಿ ಹೋಗಿರುವುದನ್ನು ನೋಡಿದ್ದೇನೆ. ವಿದ್ಯಾರ್ಥಿಗಳಲ್ಲಿ ಪ್ರಜ್ಞೆ, ಬದ್ದತೆಯಿದ್ದಾಗ ಮಾತ್ರ ಜೀವನದಲ್ಲಿ ಎಂತಹ ಸಮಸ್ಯೆ ಸವಾಲುಗಳನ್ನು ಬೇಕಾದರೂ ಎದುರಿಸಬಹುದು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ದಲಿತರು ಇನ್ನು ಅಸಮಾನತೆ, ಅಸ್ಪೃಶ್ಯತೆ ಅನುಭವಿಸುತ್ತಿದ್ದಾರೆ. ಬಿಜೆಪಿಯವರು ಜಾತಿ ಸಂಘರ್ಷವನ್ನುಂಟು ಮಾಡುತ್ತಿದ್ದಾರೆ. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ ಸಂಘಟನೆ, ಹೋರಾಟಕ್ಕೆ ಹೆಚ್ಚು ಆದ್ಯತೆ ಕೊಡಿ ಎಂದು ತಿಳಿಸಿದರು.

ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಮಿತಿ ಅಧ್ಯಕ್ಷ ರಮೇಶ್ ಎಂ.ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರುಗಳಾದ ಆಕಾಶ, ಸಲೀಂ, ರಾಧಿಕ, ಪ್ರಧಾನ ಕಾರ್ಯದರ್ಶಿ ಪರಶುರಾಂ ಜಿ. ಸಂಘಟನಾ ಕಾರ್ಯದರ್ಶಿ ಪ್ರಮೋದ್, ಪ್ರಿಯಾಂಕ, ರಚಿತ ಎಲ್ ವೇದಿಕೆಯಲ್ಲಿದ್ದರು.

ನಿವೃತ್ತ ಉಪ ವಿಭಾಗಾಧಿಕಾರಿ ಎಂ.ಮಲ್ಲಿಕಾರ್ಜುನ್, ಪ್ರೊ.ಸಿ.ಕೆ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ನಿವೃತ್ತ ಪ್ರಾಚಾರ್ಯ ಡಾ.ವಿ.ಬಸವರಾಜು ಈ ಸಂದರ್ಭದಲ್ಲಿದ್ದರು.

PREV