ದಶಮಾನೋತ್ಸವದ ಅಂಗವಾಗಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಮೆರೆದವರನ್ನು ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಬ್ಯಾಂಕ್‌ಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಗ್ರಾಹಕರ ಆಶಯಗಳನ್ನು ಪೂರೈಸುತ್ತಾ ನಿರಂತರ ಪ್ರಗತಿ ಸಾಧಿಸಬೇಕು. ಆರ್ಥಿಕವಾಗಿ ಸದೃಢವಾಗಿರುವ ಸಂಸ್ಥೆಗಳು ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ನಡೆದ ಆರ್ಯ ವೈಶ್ಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆರ್ಯ ವೈಶ್ಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆರಂಭವಾದ ಸಂದರ್ಭದಲ್ಲಿ ತಾವು ಕಾರ್ಯಕ್ರಮಕ್ಕೆ ಆಗಮಿಸಿದ್ದೆವು. ಇದೀಗ ಅದೇ ಸಂಸ್ಥೆ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ದಶಮಾನೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ಸಂಸ್ಥೆಯು ಗ್ರಾಹಕರಿಗೆ ಶೇ.೧೨ರಷ್ಟು ಲಾಭಾಂಶ ನೀಡಿರುವುದು ಅದರ ಆರ್ಥಿಕ ಸದೃಢತೆಗೆ ಸಾಕ್ಷಿಯಾಗಿದೆ ಎಂದರು.
ಸಹಕಾರ ಸಂಸ್ಥೆಗಳು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೆ, ಗ್ರಾಹಕರು ಮತ್ತು ಷೇರುದಾರರ ಆರ್ಥಿಕ ಪ್ರಗತಿಗೆ ನೆರವಾಗಬೇಕು. ಉತ್ತಮ ಆಡಳಿತ, ಶಿಸ್ತುಬದ್ಧ ಹಣಕಾಸು ನಿರ್ವಹಣೆ ಹಾಗೂ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಮುನ್ನಡೆಯುವ ಮೂಲಕ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ಆರ್ಯ ವೈಶ್ಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಜಿಲ್ಲೆಯಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರು ಮತ್ತು ವ್ಯಾಪಾರಸ್ಥರಿಗೆ ಅಗತ್ಯವಾದ ಆರ್ಥಿಕ ನೆರವು ನೀಡುವ ಮೂಲಕ ಸಂಸ್ಥೆ ಇನ್ನಷ್ಟು ಜನಪರವಾಗಿ ಕಾರ್ಯನಿರ್ವಹಿಸಲಿ ಎಂದು ಸ್ವಾಮೀಜಿ ಆಶಿಸಿದರು.
ಸೊಸೈಟಿ ಅಧ್ಯಕ್ಷ ಸಂಪಂಗಿ ಸಿ. ಮಾತನಾಡಿ, ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕಾದರೆ ಕಠಿಣ ನಿಲುವು ಮತ್ತು ಶಿಸ್ತು ಅಗತ್ಯ. ಸಂಸ್ಥೆಯ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಸಮಾಜದಲ್ಲಿ ನಿಷ್ಠುರರಾಗಬೇಕಾಗುತ್ತದೆ. ಆದರೆ ಸಂಸ್ಥೆಯ ಭವಿಷ್ಯ ಹಾಗೂ ಷೇರುದಾರರ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಿ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.
ಸೊಸೈಟಿಯಲ್ಲಿ ಮರಣೋತ್ತರ ನಿಧಿಯನ್ನು ಸಹ ಸ್ಥಾಪಿಸಲಾಗಿದ್ದು, ಸದಸ್ಯರು ಹಾಗೂ ಷೇರುದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಆರ್ಥಿಕ ಸದೃಢತೆಯನ್ನು ಮತ್ತಷ್ಟು ಹೆಚ್ಚಿಸಿ, ಷೇರುದಾರರಿಗೆ ಹೆಚ್ಚಿನ ಲಾಭಾಂಶ ಮತ್ತು ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಶಮಾನೋತ್ಸವದ ಅಂಗವಾಗಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಮೆರೆದವರನ್ನು ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಉಪಾಧ್ಯಕ್ಷ ಬಿ.ಎಸ್. ನಟರಾಜ್, ತುಮಕೂರು ಜಿಲ್ಲಾ ಆರ್ಯ ವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಎಲ್.ಆರ್. ಚಂದ್ರಶೇಖರ್, ಕೊರಟಗೆರೆ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ. ಶ್ರೀನಿವಾಸ್, ಆರ್ಯ ವೈಶ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಪಾಧ್ಯಕ್ಷ ಎಚ್.ಸಿ. ನಾಗೇಂದ್ರ ಬಾಬು, ಕನ್ನಿಕಾ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಎಂ.ಜಿ. ಸುಧೀರ್, ವಾಸವಿ ಯುವಜನ ಸಂಘದ ಮಾಜಿ ಅಧ್ಯಕ್ಷ ಬದ್ರಿಪ್ರಸಾದ್ ಸೇರಿದಂತೆ ಸೊಸೈಟಿಯ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.