ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಐಕ್ಯ ಫೌಂಡೇಶನ್, ಇನ್ನರ್ ವ್ಹೀಲ್ ಸಂಸ್ಥೆ ಸಹಯೋಗದಲ್ಲಿ ನಡೆದ ಕಲ್ಪತರು ಉತ್ಸವ ಉದ್ಘಾಟಿಸಿ, 58 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಶಾಸಕರು, ಹೇಮಾವತಿ ನೀರು ಜಿಲ್ಲೆಗೆ ಬರದಿದ್ದರೆ ಜಿಲ್ಲೆಯ ಪರಿಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಕುಡಿಯುವ ನೀರು, ಕೃಷಿ, ಅಂತರ್ಜಲವೃದ್ಧಿಗೆ ಹೇಮಾವತಿ ನೀರು ವರದಾನವಾಗಿ ರೈತರ ಬದುಕು ಹಸನಾಗಿದೆ ಎಂದರು.
ಸಾಂಪ್ರದಾಯಕ ಬೆಳೆಗಳು ಇಂದು ರೈತರ ಕೈ ಹಿಡಿಯುತ್ತಿಲ್ಲ. ಅಡಿಕೆ, ಕೊಬ್ಬರಿಯಂತಹ ವಾಣಿಜ್ಯ ಬೆಳೆಗಳಿಂದ ರೈತರು ಒಂದಿಷ್ಟು ದುಡ್ಡು ಕಾಣುತ್ತಿದ್ದಾರೆ. ದೇಶ ಸ್ವಾವಲಂಬಿಯಾಗಲು ಕೃಷಿ ಕ್ಷೇತ್ರ ಸುಭಿಕ್ಷವಾಗಿರಬೇಕು. ಹಾಗಾಗಿ ಕೃಷಿಗೆ ಹಾಗೂ ಕೃಷಿಕರಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ರೈತರಿಗೆ ಶಕ್ತಿ ತುಂಬುವ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ನೆರವಾಗುವಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ಮಾಡಬೇಕು ಎಂದು ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.ರೈತ ಹೋರಾಟಗಾರ ಗಂಗಾಧರ ಕಾಸರಘಟ್ಟ ಮಾತನಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬೇಕು ಎಂಬ ಕಾರಣಕ್ಕೆ ಕೃಷಿ ಭೂಮಿಗೆ ವಿಷಕಾರಿ ರಾಸಾಯನಿಕ ಗೊಬ್ಬರ ಹಾಕಿ ಆಹಾರವನ್ನೂ ವಿಷ ಮಾಡುತ್ತಿದ್ದೇವೆ. ಇಂದು ನಾವು ಆಹಾರದ ಹೆಸರಿನಲ್ಲಿ ಬಹುತೇಕ ವಿಷ ತಿನ್ನುತ್ತಿದ್ದೇವೆ. ಹೀಗಾಗಿಯೇ ಜನರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದೆ ನಾವು ಅನುಸರಿಸುತ್ತಿದ್ದ ಸಾವಯವ ಪದ್ದತಿಯಲ್ಲಿ ಕೃಷಿ ಮಾಡಿ ಆರೋಗ್ಯಕರ ಆಹಾರ ಬೆಳೆಯಬೇಕು. ಸಾವಯವ ಆಹಾರ ಪದಾರ್ಥಗಳನ್ನೇ ಬಳಸಬೇಕು ಎಂದು ಸಲಹೆ ಮಾಡಿದರು.