ಗದಗ: ಜಿಮ್ಸ್ ಆಸ್ಪತ್ರೆ ಸೇವೆಯಲ್ಲಿ ಶ್ರೇಷ್ಠ ಆಸ್ಪತ್ರೆ ಆಗಲಿ. ಇಲ್ಲಿ ಅತ್ಯುನ್ನತ ಸೇವೆಗಳು ಸರಳವಾಗಿ ಸಿಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹಾರೈಸಿದರು.
ಜಿಮ್ಸ್ ಆರಂಭವಾಗಿ 10 ವರ್ಷ ಪೂರ್ಣಗೊಳಿಸಿದೆ. ಆದರೆ ಇಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿದ್ದೇವೆ. ₹185 ಕೋಟಿ ಕಾಲೇಜು ಕಟ್ಟಡ ನಿರ್ಮಾಣ ಆಗಿದೆ. ಒಟ್ಟಾರೆ ₹366 ಕೋಟಿ ಖರ್ಚು ಮಾಡಿದ್ದೇವೆ. ₹10 ಕೋಟಿ ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಮಾಡಿದ್ದು, ಬಡವರಿಗೆ ಹೆಚ್ಚು ಅನುಕೂಲ ಆಗಲಿ ಎಂದರು.
ಗದಗನಲ್ಲಿ ಮಾನವ ಸಂಪನ್ಮೂಲ ಸಕಾಲಕ್ಕೆ ಸೇವೆ ಒದಗಿಸಲು ಮುಂದಾಗಬೇಕು. ನಾವು ಇಲ್ಲಿಂದ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಗದಗ ಜನರನ್ನು ಕರೆದುಕೊಂಡು ಹೋಗಿ ಬಂದಿದ್ದೇವೆ. ಅಲ್ಲಿನ ಮಾನವೀಯ ಸೇವೆ ಗೌರವ ಇಲ್ಲಿನ ಜಿಮ್ಸ್‌ನಲ್ಲಿ ಲಭ್ಯವಾಗಬೇಕು ಎಂದು ಜಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.ಇಲ್ಲಿ ಬರುವವರಿಗೆ ಸಕಾಲದಲ್ಲಿ ಸೇವೆ ನೀಡಬೇಕು. ಬರುವರಿಗೆ ಗೌರವ, ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸೇವೆ ದೊರೆಯಲಿ. ಕೊರೋನಾ ವೇಳೆಯಲ್ಲಿ ದೇಶದಲ್ಲೇ ಗದಗ ವೈದ್ಯಕೀಯ ಸೇವೆ ಮರೆಯಲಾಗದು. ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವಲ್ಲಿ ಮಹತ್ವದ ಸಾಧನೆ ಮಾಡಿದ್ದು ಅನನ್ಯ ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮೆಡಿಕಲ್ ಕಾಲೇಜು ಇತಿಹಾಸದಲ್ಲಿ ನೆನಪಿಡುವ ದಿನ ಇವತ್ತಿನ ದಿನ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಧಿಕ ಆಗುತ್ತಿವೆ. ಜಗತ್ತಿನಲ್ಲಿ ಅತಿಹೆಚ್ಚಿನ ಜನ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಮೃತರಾಗುವರ ಸಂಖ್ಯೆ ಭಾರತದಲ್ಲಿ ಅತಿ ಅಧಿಕ ಎಂಬುದು ಕಳವಳ ಮೂಡಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯ. ಇದನ್ನು ಈ ಭಾಗದ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.ಹೃದಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರು ಜನರಿಗೆ ಅರಿವು ಮೂಡಿಸಬೇಕು ಎಂದರು.
ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಪಿ. ಬೊಮ್ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, 2018ರ ಆಯ-ವ್ಯಯದಲ್ಲಿ ಕ್ಯಾಥ್‌ಲ್ಯಾಬ್ ಘೋಷಣೆ ಆಯಿತು. ವರ್ಷದ ಹಿಂದೆ ಮುಖ್ಯಮಂತ್ರಿ ಶಂಕುಸ್ಥಾಪನೆ ಮಾಡಿದ್ದರು. ಇಂದು ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. ಎಚ್.ಕೆ. ಪಾಟೀಲ ಅವರ ಕನಸಿನ ಕೂಸು ಈ ಕ್ಯಾಥ್ ಲ್ಯಾಬ್ ಎಂದರು.ಹೃದಯ ಸಂಬಂಧಿ ಕಾಯಿಲೆಗೆ ಇಲ್ಲಿ ಉನ್ನತ ತಂತ್ರಜ್ಞಾನ ಹೊಂದಿದ ಯಂತ್ರಗಳಿದ್ದು, ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಇದೆ. ಹೃದಯದ ಕೆಲಸವನ್ನು ಹೃದಯದಿಂದ ಮಾಡು ಎಂಬ ಈ ವರ್ಷದ ಘೋಷವಾಕ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದವರು ಸಚಿವ ಎಚ್.ಕೆ. ಪಾಟೀಲ ಅವರು ಎಂದರು.
ಜಿಮ್ಸ್ ಬಿಎಸ್‌ಇ ನರ್ಸಿಂಗ್ ವಿದ್ಯಾರ್ಥಿಗಳು ನಿಮ್ಮ ಹೃದಯ ನಿಮ್ಮ ಕೈಯಲ್ಲಿ ಎಂಬ ಕಿರುನಾಟಕ ಪ್ರದರ್ಶಿಸಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಸುಂಡಿ ಗ್ರಾಪಂ ಅಧ್ಯಕ್ಷ ಅಲ್ತಾಫ್ ಕಾಗದಗಾರ, ಗ್ಯಾರಂಟಿ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ರೇಖಾ ಎಸ್. ಸೋನಾವನೆ, ಪ್ರಾಂಶುಪಾಲ ಡಾ. ರಾಜು ಜಿ.ಎಂ., ಆರ್ಥಿಕ ಸಲಹೆಗಾರ ಪ್ರಶಾಂತ ಜೆ.ಸಿ., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ ಇದ್ದರು.