ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಾ.ಫ.ಗು.ಹಳಕಟ್ಟಿ ಅವರ ದಿನಾಚರಣೆಯಲ್ಲಿ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹಳಕಟ್ಟಿ ಹಾಗೂ ಅವರ ವಚನಗಳ ಸಂಗ್ರಹ ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯಲಿದೆ. ವಚನ ಸಾಹಿತ್ಯ ಬೆಳದದ್ದೇ ಇವರಿಂದ. ಅದಕ್ಕೆ ಅವರು ತಮ್ಮ ಜೀವನದ ದುಡಿಮೆಯನ್ನೆಲ್ಲಾ ವಚನ ಸಾಹಿತ್ಯ ಮೇಲೆ ಬೆಳಕು ಚೆಲ್ಲಲು ಮುದ್ರಿಸಿ ಪ್ರಚಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಜಾಪುರದ ಗೋಳಗುಮ್ಮಟ ಒಂದು ಬಾರಿ ಕೂಗಿದಲ್ಲಿ 7 ಬಾರಿ ಪ್ರತಿಧ್ವನಿಸುತ್ತದೆ. ಆದರೆ ವಚನ ಸಾಹಿತ್ಯವು ಪ್ರತಿ ಕನ್ನಡಿಗನನ್ನು ಪ್ರತಿಧ್ವಿಸುತ್ತದೆ ಎಂಬ ನಂಬಿಕೆಯಿಂದ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಈ ಮೂಲಕ ತಾನೇ ಉರಿದು ಜಗತ್ತಿಗೆ ಬೆಳಕು ನೀಡಿದವರು ಡಾ.ಫ.ಗು.ಹಳಕಟ್ಟಿಯವರು ಎಂದು ಹೇಳಿದರು.ಹಳಕಟ್ಟಿಯವರ ವಚನ ಸಾಹಿತ್ಯದ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ ನಮಗೆಲ್ಲರಿಗೂ ಮಾದರಿ. ಜೀವನದಲ್ಲಿನ ಪ್ರತಿ ಸಮಸ್ಯೆಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ಕಟ್ಟಿಕೊಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದ ಅವರು, ಫ.ಗು.ಹಳಕಟ್ಟಿಯವರ ಜೀವನ ತತ್ವಾದರ್ಶ, ಆದರ್ಶಯುತ ಬದುಕು ನಮಗೆಲ್ಲರಿಗೂ ದಾರಿದೀಪವಾಗಬೇಕು ಎಂದರು.
ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕತೆ ಹಾಗೂ ವಚನ ಸಾಹಿತ್ಯಾಸಕ್ತಿ ಕುಂದುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾಹಿತಿ ಮತ್ತು ಸಂಸ್ಕಾರದ ಕೊರತೆ. ಆದ್ದರಿಂದ ಇಂತಹ ಮಹಾನ್ ಶರಣರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಪ್ರತಿ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಅವರ ಆದರ್ಶಬದುಕು, ತತ್ವಾದರ್ಶಗಳನ್ನು ಯುವ ಪೀಳೀಗೆಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.
ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಣಧೀರ್ ಫ.ಗು.ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡಿದರು.ಈ ವೇಳೆ ಜಿಪಂ ಯೋಜನಾಧಿಕಾರಿ ಬಸವರಾಜ್, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಗೌರವ ಕಾರ್ಯದರ್ಶಿ ದಿಳ್ಳೆಪ್ಪ, ಅಖಿಲ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ವಿ.ಪರಮೇಶ್ವರಪ್ಪ, ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್, ವೀಣಾ ಮಂಜುನಾಥ್, ಶಶಿಧರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.