ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿ ‘ಪಾಂಚಜನ್ಯ’ದಲ್ಲಿ ಸೋಮವಾರ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಫೋಟೋಗಳಿಗೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯ.‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬ ಬಸವಣ್ಣನ ವಚನವನ್ನು ಉಲ್ಲೇಖಿಸಿ ಪ್ರತಿಮೆ ಮತ್ತು ಆಚರಣೆಗಳು ‘ಸ್ಥಾವರ’, ಆದರೆ ತತ್ವಗಳು ‘ಜಂಗಮ’ ಎಂದು ವಿವರಿಸಿದರು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನವರ ಒಂದೇ ವಚನವನ್ನು ಬದುಕಿನಲ್ಲಿ ಅಳವಡಿಸಿ ಕೊಂಡರೆ ಸಾಕು. ಅದೇ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಮಾರ್ಗ. ಅವರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದು, ಧರ್ಮ ಬಾಹ್ಯ ಅಲಂಕಾರಗಳಲ್ಲಿ ಇಲ್ಲ, ‘ದಯೆಯೇ ಧರ್ಮದ ಮೂಲ’ ಎಂಬುದು ಅದರ ಸಾರ ಎಂದು ಪ್ರತಿಪಾದಿಸಿದರು.
ಸಮಾಜದಲ್ಲಿ ದಯೆ, ಸತ್ಯ ಮತ್ತು ಸಮಾನತೆಯನ್ನು ಬಲಪಡಿಸುವುದಕ್ಕೆ ಬಸವಣ್ಣನವರ ತತ್ವಗಳು ಮಾರ್ಗದರ್ಶಕ. ಸಮಾಜದಲ್ಲಿ ಜಾತಿ ಆಧಾರಿತ ಅಂತರಗಳನ್ನು ದೂರ ಮಾಡುವ ಅಗತ್ಯವಿದೆ. ವೃತ್ತಿಗಳ ಆಧಾರದ ಮೇಲೆ ಸಮಾಜದಲ್ಲಿ ಜಾತಿಗಳು ರೂಪಗೊಂಡಿದ್ದು, ಜಾತೀ ಭಾವನೆ ಹೊಂದಿದ ಬಸವಣ್ಣನವರ ಅನುಯಾಯಿಗಳಾಗಲು ಸಾಧ್ಯವಿಲ್ಲ. ಇವ ನಮ್ಮವ ಎಂಬ ಮನೋಭಾವ ಬೆಳೆಸಿದಾಗ ಮಾತ್ರ ಬಸವ ತತ್ವದ ಅನುಷ್ಠಾನ ಸಾಧ್ಯ ಎಂದರು.ಬಸವಣ್ಣನವರ ವಿಚಾರಗಳು ಸತ್ಯಾಧಾರಿತವಾಗಿರುವುದರಿಂದ ಶಾಶ್ವತವಾಗಿವೆ. ಸುಳ್ಳು ಕೆಲ ದಿನ ಮಾತ್ರ ಉಳಿಯುತ್ತದೆ. ಆದರೆ ಸತ್ಯ ಶಾಶ್ವತ. ಅವರ ತತ್ವಗಳು 800 ವರ್ಷಗಳ ನಂತರವೂ ಪ್ರಸ್ತುತವಾಗಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.