ಸಮಾಜದ ಒಳಿತಿಗಾಗಿ ನಮ್ಮ ಸಾಧನೆ ಇರಲಿ: ವಿನಾಯಕ ತಲಗೇರಿ

KannadaprabhaNewsNetwork |  
Published : May 17, 2026, 02:15 AM IST
ಫೋಟೋ ಮೇ.೧೬ ವೈ.ಎಲ್.ಪಿ. ೦೧  | Kannada Prabha

ಸಾರಾಂಶ

ಜೀವನದ ಧ್ಯೇಯದ ಸಾಕಾರಕ್ಕಾಗಿ ಸಂಕಲ್ಪ ಮಾಡಬೇಕು. ಮಾಡಿದ ಸಂಕಲ್ಪ ಫಲಿಸುವಂತೆ ನಮ್ಮ ಕಳಕಳಿಯ ಪ್ರಾರ್ಥನೆ ಇರಬೇಕು.

ಪ್ರಾಂತ ಶೌರ್ಯ ಪ್ರಶಿಕ್ಷಣ ಶಿಬಿರದ ಸಮಾರೋಪ

ಕನ್ನಡಪ್ರಭ ವಾರ್ತೆ ಯಲ್ಲಾಪುರ ಜೀವನದ ಧ್ಯೇಯದ ಸಾಕಾರಕ್ಕಾಗಿ ಸಂಕಲ್ಪ ಮಾಡಬೇಕು. ಮಾಡಿದ ಸಂಕಲ್ಪ ಫಲಿಸುವಂತೆ ನಮ್ಮ ಕಳಕಳಿಯ ಪ್ರಾರ್ಥನೆ ಇರಬೇಕು. ಸಂಕಲ್ಪದ ನಂತರ ಅದರ ಸಾಕಾರಕ್ಕಾಗಿ ನಿರಂತರ ಸಾಧನೆ ಮಾಡಬೇಕು. ಸಮಾಜದ ಒಳಿತಿಗಾಗಿ ನಮ್ಮ ಸಾಧನೆ ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹಕಾರ್ಯದರ್ಶಿ ವಿನಾಯಕ ತಲಗೇರಿ ಹೇಳಿದರು.ಶನಿವಾರ ಮೇ ೯ ರಿಂದ ೧೬ರವರೆಗೆ ವಿಶ್ವದರ್ಶನ ಶಿಕ್ಷಣ ಸಮೂಹದ ಆವರಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಉತ್ತರ ಕರ್ನಾಟಕ ಪ್ರಾಂತದ ಶೌರ್ಯ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ಮನಸ್ಸಿನಲ್ಲಿ ಸಂಕಲ್ಪವಿದ್ದರೆ ಸಾಧನೆ ಸಾಧ್ಯ. ಭಕ್ತಿ, ಗೌರವದ ಮೂಲಕ ಶಕ್ತಿಯನ್ನು ಪಡೆಯಬೇಕು. ಅದು ಸಜ್ಜನ ಶಕ್ತಿಯಾಗಿರಬೇಕು. ಹನುಮಂತನ ಶಕ್ತಿ ರಾಮನ ಭಕ್ತಿಗೋಸ್ಕರ; ರಾವಣನ ಶಕ್ತಿ ವಿನಾಶಕ್ಕೋಸ್ಕರವಾಗಿತ್ತು. ಆನೆ, ಹುಲಿಯನ್ನು ಯಾರೂ ಬಲಿ ಕೊಡುವುದಿಲ್ಲ. ಕುರಿ, ಕೋಣಗಳನ್ನು ಮಾತ್ರ ಬಲಿ ಕೊಡುತ್ತಾರೆ. ಹೀಗಾಗಿ ಶಕ್ತಿವಂತರಾಗಬೇಕು. ಶಕ್ತಿಯ ಜೊತೆ ಯುಕ್ತಿಯೂ ಇರಬೇಕು. ಕೃಷ್ಣನ ಯುಕ್ತಿ, ಪಾಂಡವರ ಶಕ್ತಿ ಮಹಾಭಾರತ ಯುದ್ದದಲ್ಲಿ ಸತ್ಯದ ಗೆಲುವಿಗೆ ಕಾರಣವಾಯಿತು. ಹೀಗೆ ಶಕ್ತಿ ಯುಕ್ತಿಯಿಂದ ಚಮತ್ಕಾರ ಸಾಧ್ಯ. ಇದರೊಂದಿಗೆ ಶ್ರದ್ಧೆಯ ಭಕ್ತಿಯೂ ಇರಬೇಕು. ಜೀವನದ ಸಾರ್ಥಕತೆಗಾಗಿ ಸಾಧನೆ ಮಾಡಬೇಕು. ದೇಶ ಭಕ್ತಿ, ದೈವಭಕ್ತಿ ಮೂಡಿಸಿಕೊಂಡು ಸಮರ್ಪಣಾ ಭಾವದಿಂದ ಧರ್ಮ, ದೇಶ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಾಗಬೇಕು. ಮನೆಯ ಜೊತೆ ಸಮಾಜದ ಆಸ್ತಿಯಾಗಬೇಕು ಎಂದರು.ಅಖಿಲ ಭಾರತ ಕೇಂದ್ರೀಯ ಮಹಾಮಂತ್ರಿ ಸ್ಥಾನು ಮಾಲಯನ್ ಜಿ ಮಾತನಾಡಿ, ನಮ್ಮ ಸಂಸ್ಕಾರಯುಕ್ತ ನಡೆ, ನುಡಿ, ಆಚರಣೆಗಳನ್ನು ಇಡೀ ಸಮಾಜ ನೋಡುತ್ತಿರುತ್ತದೆ. ಶಿಬಿರದ ನಂತರ ಊರಿಗೆ ತೆರಳಿ ಸಮರ್ಪಣಾ ಭಾವದಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕು. ಹಿಂದೂ ಸಂಘಟನೆ, ಗೋರಕ್ಷಣೆಗಾಗಿ ಕಾರ್ಯ ನಿರ್ವಹಿಸಬೇಕು. ಗೀತಾ, ರಾಮಾಯಣ ಮುಂತಾದ ಆದರ್ಶಪ್ರಾಯವಾದ ಚಿಂತನೆಯ ಸನ್ಮಾರ್ಗ ತೋರಿಸುವ ಇವುಗಳನ್ನು ಪ್ರಚಾರ ಮಾಡಿ, ಉತ್ತಮ ಭಜರಂಗಿ ಕಾರ್ಯಕರ್ತನಾಗಿ ಧರ್ಮ ರಕ್ಷಣೆಗೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು.ವಿಹಿಂಪ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಪುಂಡಲೀಕ ದಳವಾಯಿ, ಕ್ಷೇತ್ರೀಯ ಭಜರಂಗ ದಳ ಸಂಯೋಜಕ ಕುಮಾರಸ್ವಾಮಿ, ಕ್ಷೇತ್ರೀಯ ಸತ್ಸಂಗ ಪ್ರಮುಖ ಮಹಾಬಲೇಶ್ವರ ಹೆಗಡೆ, ಶಿರಸಿ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ವೇದಿಕೆಯಲ್ಲಿದ್ದರು. ವಿಹಿಂಪ, ಭಜರಂಗದಳದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.ಭಜರಂಗ ದಳ ಪ್ರಾಂತ ಸಹಸಂಯೋಜಕ ಶಿವಾನಂದ ಸತ್ತಿಗೇರಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರಾಂತ ಭಜರಂಗದಳ ಸಂಯೋಜಕ ಬಸವರಾಜ ಸುಗೂರ ಶಿಬಿರದ ಮಾಹಿತಿ ನೀಡಿದರು. ರವಿಕುಮಾರ ಧರ್ಮ ರಕ್ಷಣೆಯ ಸಂಕಲ್ಪದ ಪ್ರತಿಜ್ಞಾವಿಧಿ ಭೋದಿಸಿದರು. ಮಲ್ಲಿಕಾರ್ಜುನ ಎಚ್.ಕೆ. ನಿರೂಪಿಸಿದರು. ವಿಭಾಗ ಕಾರ್ಯದರ್ಶಿ ಮಂಜಣ್ಣ ಅರೆಕಟ್ಟಾ ವಂದಿಸಿದರು.ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸುದರ್ಶನ, ಐಕ್ಯ ಮಂತ್ರ ಸಂಕಲ್ಪ ಹವನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ