ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಡಳಿತದ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ಸಾವಿರಾರು ವರ್ಷದಿಂದ ಬೇರೆ-ಬೇರೆ ಸಂಸ್ಥಾನಗಳಲ್ಲಿ ಹರಿದು-ಹಂಚಿ ಹೋಗಿದ್ದ, ಬ್ರಿಟೀಷರ ಆಳ್ವಿಕೆಯಲ್ಲೂ ಸಹ ಒಂದುಗೂಡಿ ಬದುಕಲು ಸಾಧ್ಯವಾಗದೇ ಇದ್ದ ಕನ್ನಡ ನಾಡನ್ನು ಒಂದುಗೂಡಿಸಬೇಕೆಂಬ ಕನ್ನಡಿಗರ ಆಶಯ ಪ್ರಯತ್ನವಾಗಿಯೇ ಉಳಿದಿತ್ತು. ಕನ್ನಡಿಗರನ್ನು ಒಂದುಗೂಡಿಸುವ ಭಾವನೆಗೆ ಮಣಿದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಲು ಒಲವು ತೋರಿದ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ನಿರ್ಮಾಣವಾಯಿತು. ಸಾವಿರಾರು ವರ್ಷಗಳ ಕನ್ನಡಿಗರು ಒಂದುಗೂಡುವ ಕನಸು ಈಡೇರಿತು. ಈ ದಿನವನ್ನು ನಾವಿಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಸಂಭ್ರಮಕ್ಕೆ ಕಾರಣರಾದ ಎಲ್ಲಾ ಶ್ರಮಿಕರನ್ನು ನಾವಿಂದು ಸ್ಮರಿಸಬೇಕು ಎಂದು ತಿಳಿಸಿದರು. ನಂತರ ವಿಶಾಲ ಮೈಸೂರು ರಾಜ್ಯವನ್ನು 1973ರ ನವೆಂಬರ್ 1ರಂದು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು. ಕಲ್ಪತರು ನಾಡಾದ ಈ ಜಿಲ್ಲೆಯು ರೈತರಿಗೆ ಮಾತ್ರ ಬದುಕು ಕೊಟ್ಟಿಲ್ಲ. ಸಾಹಿತ್ಯ ಲೋಕ, ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದೆ ಎಂದು ಹೇಳಿದರು. ಭಾರತ ಬಹು ಭಾಷಾ ಸಂಸ್ಕೃತಿಯ ಒಕ್ಕೂಟ. ಯಾವುದೇ ಒಂದು ಭಾಷೆ, ಸಂಸ್ಕೃತಿ, ರೀತಿ-ನೀತಿಗೆ ಸೀಮಿತವಾಗಿಲ್ಲ. ಎಲ್ಲಾ ಭಾಷೆ, ಸಂಸ್ಕೃತಿಗೆ ಸಮಾನವಾದ ಗೌರವ ಸಿಗುವಂತಾಗಬೇಕು. ಆಗ ಮಾತ್ರ ಭಾರತದ ಐಕ್ಯತೆ ಸುಭದ್ರವಾಗುತ್ತದೆ. ಯಾವುದೇ ಭಾಷೆ, ಸಂಸ್ಕೃತಿಯನ್ನು ತುಳಿಯುವ ಕೆಲಸ ಮಾಡಿದರೆ ದೇಶದ ಐಕ್ಯತೆಯನ್ನು ಕುಂದಿಸಿದಂತಾಗುತ್ತದೆ ಎಂದು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ವಿವಿಧ ಕ್ಷೇತ್ರದ ಜಿಲ್ಲಾ ಮಟ್ಟದ 71 ಹಾಗೂ ತಾಲೂಕು ಮಟ್ಟದ 24 ಸಾಧಕರನ್ನು ಗಣ್ಯರು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಪೊಲೀಸ್ ವಿಭಾಗದಲ್ಲಿ 12ನೇ ಪಡೆ ಕೆಎಸ್‌ಆರ್‌ಪಿ ರಾಜ್ಯ ಮೀಸಲು ಪೊಲೀಸ್ ತಂಡಕ್ಕೆ ಪ್ರಥಮ ಹಾಗೂ ಡಿಎಆರ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು. ಎನ್‌ಸಿಸಿ ವಿಭಾಗದಲ್ಲಿ ಸರ್ವೋದಯ ಕಾಲೇಜಿನ ಬಾಲಕರ ತಂಡ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕರ ತಂಡಕ್ಕೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಕೊಡಮಾಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಆರ್ಯನ್ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸೇವಾ ದಳ ವಿಭಾಗದಲ್ಲಿ ಕನ್ನಿಕಾ ಆಂಗ್ಲಶಾಲೆ ಹಾಗೂ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಕ್ರಮವಾಗಿ ಮೊದಲ ಹಾಗೂ ಎರಡನೇ ಬಹುಮಾನವನ್ನು ವಿತರಿಸಲಾಯಿತು.