ದೇವತಾ ಕಾರ್ಯಗಳು ಅವಿರತವಾಗಿ ನಡೆಯಲಿ: ಪರ್ತಗಾಳಿ ಸ್ವಾಮೀಜಿ

KannadaprabhaNewsNetwork |  
Published : Jun 10, 2026, 02:30 AM IST
ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಭಟ್ಕಳದ ಕಾಮಾಕ್ಷಿ ದೇವರಿಗೆ ವಿಶೇಷ ಕಲಶಾಭಿಷೇಕ ನೆರವೇರಿಸಿದರು. | Kannada Prabha

ಸಾರಾಂಶ

ದೇವರ ಮೂರ್ತಿಯಲ್ಲಿ ದೈವಿಕ ಚೈತನ್ಯ ಮತ್ತು ಸಾನಿಧ್ಯ ನಿರಂತರವಾಗಿ ನೆಲೆಸಿರಬೇಕಾದರೆ ದೇವತಾ ಕಾರ್ಯಗಳು, ಕಲಶಾಭಿಷೇಕ ಅವಿರತವಾಗಿ ನಡೆಯಬೇಕು.

ಶ್ರೀಗಳಿಂದ ಭಟ್ಕಳದ ಕಾಮಾಕ್ಷಿ ದೇವಿಗೆ ಕಲಶಾಭಿಷೇಕ

ಕನ್ನಡಪ್ರಭ ವಾರ್ತೆ ಭಟ್ಕಳ

ದೇವರ ಮೂರ್ತಿಯಲ್ಲಿ ದೈವಿಕ ಚೈತನ್ಯ ಮತ್ತು ಸಾನಿಧ್ಯ ನಿರಂತರವಾಗಿ ನೆಲೆಸಿರಬೇಕಾದರೆ ದೇವತಾ ಕಾರ್ಯಗಳು, ಕಲಶಾಭಿಷೇಕ ಅವಿರತವಾಗಿ ನಡೆಯಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಕಲಶಾಭಿಷೇಕ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಧಾರ್ಮಿಕ ಅನುಷ್ಠಾನಗಳ ಮೂಲಕ ದೇವರ ಮೂರ್ತಿಯಲ್ಲಿ ದೇವರ ಸಾನಿಧ್ಯವನ್ನು ನಾವು ಆಹ್ವಾನಿಸುತ್ತೇವೆ. ದೇವರು ನೆಲೆಸಬೇಕಾದರೆ ಅದಕ್ಕೆ ತಕ್ಕ ಪಾವಿತ್ರ‍್ಯ, ಶ್ರದ್ಧೆ ಮತ್ತು ವ್ಯವಸ್ಥೆ ಇರಬೇಕು. ಅವಿರತವಾಗಿ ಧಾರ್ಮಿಕ ಕಾರ್ಯಗಳು ನಡೆಯುವ ಮೂಲಕ ದೇವರ ಸಾನಿಧ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಆಗ ಭಕ್ತರು ದೇವರ ಸನ್ನಿಧಿಯಲ್ಲಿ ಮಾಡುವ ಪ್ರಾರ್ಥನೆಗಳು ಶೀಘ್ರವಾಗಿ ಫಲಿಸುತ್ತವೆ ಎಂದು ತಿಳಿಸಿದರು.

ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿ ಇದ್ದಾಗ ನಮ್ಮ ಕೆಲಸಗಳು ಸುಲಭವಾಗಿ ನೆರವೇರುವಂತೆ, ದೇವರ ಉಪಸ್ಥಿತಿ ಇರುವ ಸ್ಥಳದಲ್ಲಿ ಭಕ್ತರ ಸಂಕಲ್ಪಗಳೂ ಸಫಲಗೊಳ್ಳುತ್ತವೆ. ಆದ್ದರಿಂದ ಮೂಲ ಬಿಂಬದಲ್ಲಿ ಚೈತನ್ಯವನ್ನು ಹೆಚ್ಚಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಅಧಿಕ ಮಾಸದ ಪವಿತ್ರ ಸಂದರ್ಭದಲ್ಲಿ ನಡೆದ ಅಭಿಷೇಕ ಹಾಗೂ ದೇವತಾ ಕಾರ್ಯಗಳಿಂದ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಇಲ್ಲಿನ ಸಾನಿಧ್ಯದಲ್ಲಿ ಉಚ್ಛರಿಸಿದ ಪ್ರತಿಯೊಂದು ಶುಭ ನುಡಿಯೂ ಸತ್ಯವಾಗಲಿ. ಭಕ್ತರ ವಿಶ್ವಾಸ ಮತ್ತು ಭಕ್ತಿ ಇನ್ನಷ್ಟು ವೃದ್ಧಿಯಾಗಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರೀಶ ಕಾಮತ, ಗಿರಿಧರ ನಾಯಕ, ನಾಗೇಶ ಪೈ ತೋರ್ಷಾಲ, ವಸಂತ ಶ್ಯಾನಭಾಗ, ವ್ಯವಸ್ಥಾಪಕ ನಂದು ಕಾಮಕರ ಸೇರಿದಂತೆ ಕುಳಾವಿ ಭಜಕರರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಉದ್ಯಮಿ ಪ್ರದೀಪ ಪೈ ಸ್ವಾಗತಿಸಿದರು. ಅರ್ಚಕರಾದ ವಿನೋದ ಭಟ್, ಗಣಪತಿ ಭಟ್, ಶಾಂತಕೃಷ್ಣ ಭಟ್, ನಾಗೇಶ ಪುರಾಣಿಕ, ವಿನಾಯಕ ಭಟ್ ಹಾಗೂ ಗಣೇಶ ಭಟ್ ಧಾರ್ಮಿಕ ವಿಧಿವಿಧಾನಗಳಲ್ಲಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೇಶ್ವರ: ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಅಶೋಕ್ ಪೂಜಾರಿ ಒತ್ತಾಯ
ಪ್ರಕೃತಿ ವಿಕೋಪ ನಿರ್ವಹಣೆ: ಡಾ. ಮಂತರ್‌ ಗೌಡ ಸೂಚನೆ