ಧಾರವಾಡ: ಸುತ್ತಲಿನ ಹಲವು ಗ್ರಾಮಗಳ ಬಡ ಮಕ್ಕಳಿಗೆ ಆಸರೆಯಾಗಿರುವ ಇಲ್ಲಿಗೆ ಸಮೀಪದ ದೇವರ ಹುಬ್ಬಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯ ಅಭಿವೃದ್ಧಿ ಬಗ್ಗೆ ತುಸು ಕರುಣೆ ತೋರಬೇಕಾಗಿದೆ.
ಕೊರತೆಗಳ ಆಗರ: 20 ವರ್ಷಗಳ ಹಳೆಯ ಡೆಸ್ಕ್‌ಗಳಿದ್ದು ರಿಪೇರಿ ಹಂತದಲ್ಲಿವೆ. ಮುರುಕಲು ಡೆಸ್ಕಗಳಲ್ಲಿಯೇ ಕುಳಿತು ಮಕ್ಕಳು ಕಲಿಯುತ್ತಿದ್ದಾರೆ. ಇರುವ 12 ಕೊಠಡಿಗಳ ಪೈಕಿ ಎಂಟು ಕೊಠಡಿಗಳು ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಬೀಳುವ ಹಂತದಲ್ಲಿವೆ. ಹೀಗಾಗಿ ಅವುಗಳಲ್ಲಿ ತರಗತಿ ನಡೆಸುತ್ತಿಲ್ಲ. ಉಳಿದ ನಾಲ್ಕು ಕೊಠಡಿಗಳಲ್ಲಿ 400 ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ, ಕಂಪ್ಯೂಟರ್ ಕೋಣೆ, ವಿಜ್ಞಾನ ಕೋಣೆ, ಶಿಕ್ಷಕರ ಕೊಠಡಿ, ಕ್ರೀಡಾ ವಸ್ತುಗಳ ಸಂಗ್ರಹ ಸೇರಿದಂತೆ ಎಲ್ಲವೂ ನಡೆಯಬೇಕಿದೆ. ಇದು ಶಿಕ್ಷಕರಿಗೆ ದುಸ್ತರವಾಗಿದೆ. ಇನ್ನು, 200 ವರೆಗೂ ಬಾಲಕಿಯರಿದ್ದು ಪ್ರತ್ಯೇಕ ಶೌಚಾಲಯಗಳಿಲ್ಲ. ಬರೀ ಬಾಲಕಿಯರಲ್ಲ ಯಾರಿಗೂ ಶೌಚಾಲಯಗಳಿಲ್ಲ. ಕುಡಿಯುವ ನೀರಿನ ಟ್ಯಾಂಕ್‌ಗಳಿವೆ. ನೀರಿನ ಸಂಪರ್ಕ ಇಲ್ಲದ ಕಾರಣ ಅವುಗಳಲ್ಲಿ ನೀರಿಲ್ಲ. ಕಂಪ್ಯೂಟರ ತರಗತಿಗೆ ಕಂಪೂಟರಗಳಿಲ್ಲ. ಕಂಪೌಂಡ್ ಗೋಡೆ ರಿಪೇರಿ ಇದೆ.
ಕೊರತೆ ಮಧ್ಯೆ ಸಾಧನೆ: ತರಗತಿಗಳು ಶುರುವಾಗಿ ವಾರ ಕಳೆಯುತ್ತಿದ್ದರೂ ಪಠ್ಯಪುಸ್ತಗಳೂ ಇಲ್ಲ. ಸಮವಸ್ತ್ರವೂ ಇಲ್ಲ. ಒಟ್ಟಾರೆ ಎಲ್ಲ ಸೌಕರ್ಯಗಳ ಇಲ್ಲಗಳ ಮಧ್ಯೆ ದೇವರ ಹುಬ್ಬಳ್ಳಿ ಶಾಲೆ ಮಾತ್ರ ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ರಷ್ಟು ಸಾಧನೆ ಮಾಡಿರುವ ಶಾಲೆಯ ಶಿಕ್ಷಕರು ಕೊರತೆಗಳ ಮಧ್ಯೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶಾಲೆಯಲ್ಲಿನ ಕೊರತೆಗಳ ಬಗ್ಗೆ ಶಿಕ್ಷಕರು, ಎಸ್‌ಡಿಎಂಸಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹತ್ತು ಹಲವು ಬಾರಿ ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ ಎಂಬುದೇ ಬೇಸರದ ಸಂಗತಿ.ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇಡೀ ಸಮಾಜ ಸರ್ಕಾರಿ ಶಾಲೆಗಳನ್ನು ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಲಾಗುತ್ತದೆ. ಆದರೆ, ಖಾಸಗಿ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಖಾಸಗಿ ಶಾಲೆಗಳಲ್ಲಿರುವ ಸೌಕರ್ಯಗಳ ಬಗ್ಗೆಯೂ ಹೋಲಿಕೆಯಾಗಬೇಕು. ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಬಿದ್ದರೆ ಶಿಕ್ಷಕರೇ ಹೊಣೆ ಎನ್ನುವ ಇಲಾಖೆ ಹಾಗೂ ಸರ್ಕಾರ ಮೂಲಭೂತ ಸೌಕರ್ಯ ನೀಡುವಲ್ಲಿ ಯಾರು ಜವಾಬ್ದಾರರು ಎಂಬುದರ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಪ್ರಶ್ನಿಸಿದರು.
ಸುತ್ತಳ್ಳಿಗೂ ದೇವರ ಹುಬ್ಬಳ್ಳಿ ಶಾಲೆಯ ಶಿಕ್ಷಣದಿಂದ ಹೆಸರು ಮಾಡಿದ್ದರೂ ಸೌಕರ್ಯಗಳಿಂದ ಹಿಂದೆ ಬಿದ್ದಿದೆ. ಕುಡಿಯುವ ನೀರು, ಕೋಣೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಿಸಿದ ಎಲ್ಲರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬೇಸರ ಎಂದರೆ, ಶಾಲಾ ಮಕ್ಕಳು ಸಹ ಶೌಚಾಲಯ, ವಿದ್ಯುತ್ ದೀಪ ಸೇರಿದಂತೆ ಶಾಲೆಯ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದ್ದಾರೆ.