ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪ್ರತಿಯೊಬ್ಬರಲ್ಲಿ ದೇಶ, ದೇಶಾಭಿಮಾನ ದೇಶಕ್ಕಾಗಿ ಪ್ರಾಣತೆತ್ತ ಅನೇಕ ಹುತಾತ್ಮರ ಸ್ಮರಣೆ ಅಗತ್ಯ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಅವರಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಪಿಮುಷ್ಠಿಯಿಂದ ರಕ್ಷಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಲಕ್ಷಾಂತರ ಮಹನೀಯರು ತ್ಯಾಗ ಮಾಡಿದ್ದಾರೆ. ಈ ಸ್ವಾತಂತ್ರ್ಯವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ವಿಶ್ವದಲ್ಲಿ ಭಾರತವನ್ನು ಉನ್ನತ ಸ್ಥಾನದಲ್ಲಿ ನಿಲ್ಲಬೇಕಾದರೆ ನಾವು ನೀವೆಲ್ಲರೂ ಶ್ರಮ ವಹಿಸಬೇಕಾಗಿದೆ. ಭಾರತಾಂಭೆಯ ಮಕ್ಕಳಂತೆ ಎಲ್ಲರೂ ಶಾಂತಿ, ಸೌಹಾರ್ದತೆ ಕಾಪಾಡುವುದರ ಜತೆಗೆ ಸಹಬಾಳ್ವೆಯಿಂದ ಬಾಳಬೇಕಿದೆ ಎಂದು ಹೇಳಿದರು.ತಾಲೂಕಿನ ನೂತನ ಕಚೇರಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಪಟ್ಟಣದ ನೂತನ ಬಸ್ ನಿಲ್ದಾಣದ ಉದ್ಘಾಟನೆಗೊಳ್ಳಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಕಾಲೇಜು ನಿರ್ಮಾಣ ಸೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ನೆನೆದು ಅವರಿಗೆ ಹೃದಯದಾಳದ ಕೃತಜ್ಞತೆ ಸಮರ್ಪಿಸುವ ದಿನ ಈ ಸುದಿನ ಎಂದರು.
ಇದೇ ವೇಳೆ ತಾಪಂ ಇಒ ಭಾರತಿ ಚೆಲುವಯ್ಯ, ಪಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ, ಪಿಎಸ್ಐ ಬಸವರಾಜ ತಿಪ್ಪರಡ್ಡಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಶೋಕ ಹೆಗಡೆ, ಹೆಸ್ಕಾಂ ಎಇಇ ಉಮೇಶ ಪಟ್ಟಣ, ಎಂ.ಜಿ.ಯಂಕಂಚಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಘವೇಂದ್ರ ಗುಡಿಮನಿ, ಪಪಂ ಸದಸ್ಯರಾದ ಕಾಸುಗೌಡ ಬಿರಾದಾರ, ಶಾಂತಯ್ಯ ಜಡಿಮಠ, ಬಸೀರ ಅಹ್ಮದ್ ಬೇಪಾರಿ, ರಮೇಶ ಮಸಿಬಿನಾಳ, ಉಮೇಶ ರೂಗಿ, ಮಂಗಳೇಶ ಕಡ್ಲೇವಾಡ, ಸುಮಂಗಲ ಸೇಬೆನವರ, ಸಿಂಧೂರ ಡಾಲೇರ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಪಪಂ ನಾಮನಿರ್ದೇಶಿತ ಸದಸ್ಯರು, ಕಂದಾಯ, ಪಪಂ ಸಿಬ್ಬಂದಿ,ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿಆರ್‌ಪಿ ವಿಜಯಲಕ್ಷ್ಮಿ ನವಲಿ ನಿರೂಪಿಸಿದರು. ಕಂದಾಯ ಇಲಾಖೆಯ ಸಂಗಮೇಶ ಗ್ವಾಲೆದ್ ವಂದಿಸಿದರು.