ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಮಂಗಳವಾರ ಅತ್ಯಂತ ಪ್ರಾಚೀನ ದೈವ ಸನ್ನಿಧಿಗಳಾದ ಶ್ರೀ ಕೇಶವ ದೇವರು ಹಾಗೂ ಶ್ರೀ ವೀರನರಸಿಂಹ ದೇವಸ್ಥಾನದ ಪುನರ್‌ಪ್ರತಿಷ್ಠಾಪನೆಯನ್ನು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು ನೆರವೇರಿಸಿದರು.
ಶಿಗ್ಗಾಂವಿ/ಬಂಕಾಪುರ: ಸಮಾಜದಲ್ಲಿ ಸನಾತನ ಧರ್ಮಕ್ಕೆ ವಿರೋಧಿಯಾದ, ಸನಾತನ ಧರ್ಮದ ಅನುಸರಣೆಗೆ ಅಡ್ಡಿಯಾಗುವ ಹಲವು ದುಷ್ಟಶಕ್ತಿಗಳನ್ನು ವೀರ ನರಸಿಂಹ ನಿವಾರಿಸಲಿ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು ಪ್ರಾರ್ಥಿಸಿದರು.
ತಾಲೂಕಿನ ಬಂಕಾಪುರ ಪಟ್ಟಣದ ಮಂಗಳವಾರ ಅತ್ಯಂತ ಪ್ರಾಚೀನ ದೈವ ಸನ್ನಿಧಿಗಳಾದ ಶ್ರೀ ಕೇಶವ ದೇವರು ಹಾಗೂ ಶ್ರೀ ವೀರನರಸಿಂಹ ದೇವಸ್ಥಾನದ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಮನೋದೋಷಗಳನ್ನು ತಿದ್ದುವ, ಸನ್ಮಾರ್ಗ ತೋರುವ ಹಾಗೂ ಎಲ್ಲ ದೇವತೆಗಳಿಂದ ಪೂಜಿತನಾದ ಕೇಶವ ದೇವರು ಇಂದ್ರಿಯಗಳ ದುಷ್ಟ ಪ್ರವೃತ್ತಿಯನ್ನು ನಾಶ ಮಾಡುವವ. ದುಷ್ಟ ಕಾಮನೆಗಳಿಂದ ಪ್ರೇರಿತವಾದ ಇಂದ್ರಿಯಗಳ ನಿಗ್ರಹಕ್ಕೆ ಕೇಶವ ನಾಮಕನಾದ ಭಗವಂತನ ಆರಾಧನೆ ಅವಶ್ಯ ಎಂದರು.
ಲೋಕಕ್ಷೇಮಕ್ಕಾಗಿ ಶ್ರೀ ವಾದಿರಾಜ ಶ್ರೀಪಾದರ ತಪದ ಪ್ರಭಾವದಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಕೇಶವ ಹಾಗೂ ವೀರ ನರಸಿಂಹ ಪ್ರತಿಮೆಗಳು ವಿಶೇಷವಾಗಿದೆ ಎಂದು ಹೇಳಿದರು.
ಭಾಗವತದಲ್ಲಿನ ಕೇಶಿ ಎಂಬ ಅಸುರನ ಸಂಹಾರ ಕೈಗೊಂಡ ಕೃಷ್ಣನ ಕೇಶವ ರೂಪದ ಮಹಿಮೆ ಹಾಗೂ ಶ್ರೀ ನರಸಿಂಹ ದೇವರ ಅವತಾರ ಕಾರ್ಯದ ಬಗ್ಗೆ ಶ್ರೀಗಳು ವಿವರಿಸಿದರು.
ಕಾರ್ಯಕ್ರಮದ ಅನ್ವಯ ಶ್ರೀ ಕೇಶವ ಹಾಗೂ ವೀರನರಸಿಂಹ ದೇವರ ಪುನರ್‌ಪ್ರತಿಷ್ಠಾಪನೆ, ಪುಣ್ಯಾಹ ವಾಚನ, ನೇತ್ರೋನ ಮಿಲನ, ಶೋಭಾಯಾತ್ರೆ, ಕಲಶ ಪ್ರತಿಷ್ಠಾಪನೆ, ಹೋಮ, ಕಲಶಾಭಿಷೇಕ ಸಭಾ ಕಾರ್ಯಕ್ರಮಗಳು ಜರುಗಿದವು. ವಿ. ವೆಂಕಟೇಶಾಚಾರ್ಯ ಜಹಗೀರದಾರ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಸನಿಹದ ಉಗ್ರ ಗುಹಾ ನರಸಿಂಹ ದೇವಸ್ಥಾನದಲ್ಲಿ ಪಂಚಾಮೃತ, ಶಾಂತಿ ಪಾಠ, ಮುದ್ರಾಧಾರಣೆ ಶ್ರೀರಾಮದೇವರ ಸಂಸ್ಥಾನ ಪೂಜೆಯನ್ನು ಶ್ರೀಗಳಾದ ಸತ್ಯಾತ್ಮತೀರ್ಥರು ನೆರವೇರಿಸಿದರು.
ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆ ವಿತರಣೆ ನೆರವೇರಿತು. ಪೂಜಾರ್ ಪರಿವಾರದ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.