ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲ್ಯಾಬ್ ಉದ್ಘಾಟನೆ
ದೇಶ ತನ್ನ ಮುಂದಿನ ಅಭಿವೃದ್ಧಿಯಲ್ಲಿ ಯುವಜನರಿಂದ ಸಾಕಷ್ಟು ಕೊಡುಗೆಯನ್ನು ನಿರೀಕ್ಷಿಸಿದೆ. ದೇಶ, ಸಮಾಜ, ಪಾಲಕರು ಹಾಗೂ ಶಿಕ್ಷಕರು ಕಂಡ ಕನಸುಗಳನ್ನು ಮತ್ತು ನಿರೀಕ್ಷೆಗಳನ್ನು ಸಾಕಾರಗೊಳಿಸುವ ಬಹುದೊಡ್ಡ ಸವಾಲು ಇಂದು ಯುವಜನರಿಗೆ ಎದುರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯಡಿ ಮಂಜೂರಾದ ಕಂಪ್ಯೂಟರ್ ಮತ್ತು ಯು.ಪಿ.ಎಸ್. ಲ್ಯಾಬ್ ಲೋಕಾರ್ಪಣೆ ಮಾಡಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಂಜೂರಾದ 25 ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಸಮರ್ಪಿಸಿ ಮಾತನಾಡಿದರು.ದೇಶದಲ್ಲಿ ಉದ್ಯೋಗ ಸಾಕಷ್ಟಿದೆ. ಆದರೆ, ಉದ್ಯೋಗ ಮಾಡುವ ಸಮರ್ಥರು ಯಾರೂ ಸಿಗುತ್ತಿಲ್ಲ. ಹಿಂದೆ ಶಿಫಾರಸಿನ ಮೇಲೆ ಉದ್ಯೋಗ ದೊರೆಯುವ ಕಾಲವಿತ್ತು. ಆದರೀಗ, ಗುಣಮಟ್ಟ, ಕೌಶಲ್ಯ, ಶಿಕ್ಷಣ ಜಾಣ್ಮೆಯನ್ನು ಕಡ್ಡಾಯವಾಗಿ ಪರಿಗಣಿಸಲಾಗುತ್ತಿದೆ. ಆಧುನಿಕ ಮಾರುಕಟ್ಟೆ, ಕೈಗಾರಿಕಾ ಕ್ಷೇತ್ರ ಬಯಸುವಂತಹ ಶಿಕ್ಷಣ ಕೌಶಲ್ಯವನ್ನು ಪಡೆಯಲು ಯುವಸಮೂಹ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಕೆ.ಎಸ್.ಡಿ.ಎಂ. ಬೆಂಗಳೂರು ಪ್ರತಿನಿಧಿ ಪರಶುರಾಮ ನಾಯ್ಕ, ಪುರಸಭಾ ಮಾಜಿ ಉಪಾಧ್ಯಕ್ಷ ಸತ್ಯಜಿತ ಗಿರಿ ಇದ್ದರು.
-----