ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿ ವಿಸ್ತರಿಸಿರುವ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗ ಖಾತರಿ ನೀಡುವ ಮೂಲಕ ಬಡ ಕಾರ್ಮಿಕರ ಬದುಕಿಗೆ ಮತ್ತಷ್ಟು ಭದ್ರತೆ ಒದಗಿಸಿದ್ದು, ದಿನಗೂಲಿ ₹370 ರಿಂದ ₹382ಕ್ಕೆ ಹೆಚ್ಚಿಸಿರುವುದು ಗ್ರಾಮೀಣ ಕೂಲಿಕಾರರಿಗೆ ಮತ್ತೊಂದು ಸಂತಸದ ಸುದ್ದಿಯಾಗಿದೆ.
ಕುಷ್ಟಗಿ ತಾಲೂಕಿನಲ್ಲೂ ಈ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಗ್ರಾಪಂದಿಂದ ತಾಲೂಕು ಮಟ್ಟದವರೆಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆ ಬಲಪಡಿಸಲಾಗಿದೆ ಎಂದು ತಾಪಂ ಇಒ ಅಮರೇಶ ತಿಳಿಸಿದ್ದಾರೆ.ವಲಸೆ ತಡೆಯುವುದೇ ಉದ್ದೇಶ: ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆ ಮಾಡಿ, ಸ್ವಂತ ಊರಿನಲ್ಲಿಯೇ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶ ಕಲ್ಪಿಸುವುದು ಹೊಸ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿರತೆ ಹೆಚ್ಚುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ವೇಗ ಸಿಗುವ ನಿರೀಕ್ಷೆಯಿದೆ.
ಇ-ಕೆವೈಸಿ ಕಡ್ಡಾಯ: ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯಂತೆ ಎಲ್ಲ ನೋಂದಾಯಿತ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಬಾಕಿ ಉಳಿದಿರುವ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕಿದ್ದು, ಈ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯೋಜನೆಯ ಬದಲಾವಣೆಯಿಂದ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುವುದಿಲ್ಲ. ಎಲ್ಲ ಅರ್ಹರಿಗೆ ನಿರಂತರ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.