ಕನ್ನಡಪ್ರಭ ವಾರ್ತೆ, ತುಮಕೂರು ಸಮಾಜದ ಶಕ್ತಿಯಾಗಿರುವ ಯುವಜನತೆ, ಗುಣಮಟ್ಟದ ಶಿಕ್ಷಣ ಪಡೆದು, ಸರ್ವಸ್ವವನ್ನು ತಮ್ಮದಾಗಿಸಿಕೊಳ್ಳುವತ್ತ ಮುನ್ನಡೆಯಬೇಕೆಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ನಗರದ ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ 2023-24 ನೇ ಸಾಲಿನ ಎರಡನೇ ಬ್ಯಾಚ್‌ನ ಮೊದಲನೇ ವರ್ಷದ ಎಂ.ಬಿ.ಬಿ.ಎಸ್ ತರಗತಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲರು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎಂದರು. ಸಿದ್ದಗಂಗಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಇದು ಹೆಮ್ಮೆ ಪಡುವ ವಿಚಾರ. ಕುಗ್ರಾಮದಿಂದ ಬಂದ ಬಡವರ ಮಕ್ಕಳು ಮೆಡಿಕಲ್ ಶಿಕ್ಷಣ ಪಡೆಯಬಹುದು ಎಂಬುದನ್ನು ಸಿದ್ದಗಂಗಾ ಮಠ ಮಾಡಿ ತೋರಿಸಿದೆ. ವಿದ್ಯೆ ಎಂಬುದು ಸಾಧಕರಿಗೆ ಮಾತ್ರ ಒಲಿಯುವಂತದ್ದು, ಶ್ರದ್ಧೆ ಮತ್ತು ನಿರಂತರ ಪರಿಶ್ರಮದಿಂದ ಶಿಕ್ಷಣ ಪಡೆದಾತನಿಗೆ ಎಲ್ಲವನ್ನು ತನ್ನದಾಗಿಸಿಕೊಳ್ಳುವ ಶಕ್ತಿ ಬರುತ್ತದೆ. ಲಿಂಗ, ಧರ್ಮ, ಜಾತಿ ಭೇದವಿಲ್ಲದೆ ಎಲ್ಲರಲ್ಲಿಯೂ ಬುದ್ಧಿ ಇರುತ್ತದೆ. ಆದರೆ, ಅದನ್ನು ಗುರುತಿಸಿಕೊಂಡು, ತನ್ನ ಸಾಧನೆಗೆ ಅದನ್ನು ಬಳಸಿಕೊಳ್ಳುವವನೇ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಎಂದು ಕೆ.ಎನ್.ರಾಜಣ್ಣ ನುಡಿದರು. ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ದೃಢ ನಿರ್ಧಾರ ತೆಗೆದುಕೊಂಡು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿದ ನಂತರ ಸೇವಾ ಮನೋಭಾವದಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ನೋವಿಲ್ಲದೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ವಿಧಾನ ಸಂಶೋಧಿಸಿದ ಡಾ. ಸಿ.ಪಳಿನಿವೇಲು ಅಂತಹವರು ನಿಮಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಜೆಮ್ ಆಸ್ಪತ್ರೆಯ ಛೇರ್ಮನ್ ಡಾ. ಸಿ.ಪಳನಿವೇಲು ಮಾತನಾಡಿ, ಬಡತನದಂತಹ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಬದ್ಧತೆಯಿಂದ ಶ್ರಮಪಟ್ಟಲ್ಲಿ ಗುರಿಮುಟ್ಟಬಹುದು ಎಂಬುದಕ್ಕೆ ನಾನೇ ಜೀವಂತ ಉದಾಹರಣೆ. ಬಡತನದ ಕಾರಣಕ್ಕೆ ಶಾಲೆ ಬಿಟ್ಟು, ನಂತರ ಓದು ಮುಂದುವರೆಸಿ 20 ನೇ ವರ್ಷಕ್ಕೆ ಎಸ್.ಎಸ್. ಎಲ್.ಸಿ ಮುಗಿಸಿ, ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಿದ್ದರಿಂದ ಒಳ್ಳೆಯ ವೈದ್ಯ ಎಂದು ಜನರು ಗುರುತಿಸುವಂತಾಗಿದೆ. ವೈದ್ಯಕೀಯ ವೃತ್ತಿ ಸಮಾಜದ ಬಡವರಿಗೆ ಉತ್ತಮ ಸೇವೆ ಸಲ್ಲಿಸುವ ಅವಕಾಶ ನೀಡುವ ಪವಿತ್ರ ವೃತ್ತಿಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಈಗಿನಿಂದಲೇ ಅರ್ಥೈಸಿಕೊಂಡು ಸಮಾಜದ ಆಸ್ತಿಗಳಾಗಬೇಕು ಎಂದರು. ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಚ್ಚಿದಾನಂದ ಮಾನತಾಡಿ, ದೇಶದಲ್ಲಿ ಪ್ರತಿವರ್ಷ 20 ಲಕ್ಷ ಜನ ನೀಟ್ ಪರೀಕ್ಷೆ ಬರೆಯುತ್ತಾರೆ. ಇವರಲ್ಲಿ ಶೇ ೫೦ರಷ್ಟು 10 ಲಕ್ಷ ಜನ ತೇರ್ಗಡೆ ಹೊಂದಿದರೆ, ಅವರಲ್ಲಿ 1.06ಲಕ್ಷ ಜನರಿಗೆ ಮಾತ್ರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುತ್ತದೆ. ಎಂ.ಬಿ.ಬಿ.ಎಸ್ ಶಿಕ್ಷಣ ಪಡೆದರೆ ವೈದ್ಯ ವೃತ್ತಿಯ ಜೊತೆಗೆ ಹಲವಾರು ಅವಕಾಶಗಳಿವೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಐಎಎಸ್, ಕೆ.ಎಸ್.ಎಸ್, ಐಎಂಎಸ್, ವೈದ್ಯಕೀಯ ಶಿಕ್ಷಣದ ಉಪನ್ಯಾಸಕರಾಗಿ, ಉದ್ಯಮಿಗಳು ಆಗಲು, ವೈದ್ಯಕೀಯ ಪರಿಕರ ಉತ್ಪಾದಿಸುವ ಕಂಪನಿಗಳಲ್ಲಿ ಸಿಇಒ ನಂತರ ಹುದ್ದೆಗಳಿಗೆ ಸೇರಲು ಅವಕಾಶವಿದೆ. ಆಯ್ಕೆ ನಿಮ್ಮದು, ನಿಮ್ಮ ಕನಸಿಗೆ ರೆಕ್ಕೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಸಿದ್ದಗಂಗಾ ಸಂಸ್ಥೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮೆಡಿಕಲ್ ಕಾಲೇಜು ಗುಣಮಟ್ಟದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ತಾವೆಲ್ಲರೂ ವ್ಯಸನ ಮುಕ್ತರಾಗಿ, ಆಲಸ್ಯದಿಂದ ದೂರವಿದ್ದು, ಒಳ್ಳೆಯ ವೈದ್ಯರಾಗಿ ಹೊರಹೊಮ್ಮಿ ಎಂದು ಶುಭಕೋರಿದರು. ನಿರ್ದೇಶಕರಾದ ಡಾ.ಪರಮೇಶ್ ಮಾತನಾಡಿ, ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಉತ್ತಮ ವೈದ್ಯರನ್ನು ತಯಾರು ಮಾಡುವ ಮಹದಾಸೆಯಿಂದ ಸಿದ್ದಗಂಗಾ ಮಡಿಕಲ್ ಕೆಲಸ ಮಾಡುತ್ತಿದೆ. ಗುಣಮಟ್ಟದ ಬೋಧನೆ, ಉತ್ತಮ ಮಾರ್ಗದರ್ಶನ ಸಿಬ್ಬಂದಿಯಿಂದ ದೊರೆಯಲಿದೆ ಎಂದರು.