ಬಳ್ಳಾರಿಯಲ್ಲಿ ಮರ್ಯಾದಾ ಪುರುಷೋತ್ತಮನ ಧ್ಯಾನ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಇಡೀ ಜಿಲ್ಲೆಯಲ್ಲಿ ಶ್ರೀರಾಮಮಂದಿರ ಕುರಿತು ವಿಚಾರಗಳೇ ಚರ್ಚೆಯಲ್ಲಿದ್ದು, ಸೋಮವಾರ ಅಯೋಧ್ಯೆಯಲ್ಲಿ ಜರುಗುವ ವಿವಿಧ ಧಾರ್ಮಿಕ ವಿಧಾನಗಳತ್ತ ಜಿಲ್ಲೆಯ ಭಕ್ತರ ದೃಷ್ಟಿ ನೆಟ್ಟಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಜಿಲ್ಲಾದ್ಯಂತ ರಾಮಭಕ್ತರ ಸಡಗರ, ಸಂಭ್ರಮ ಮೇಳೈಸಿದೆ.

ಶ್ರೀರಾಮ ಪ್ರತಿಷ್ಠಾಪನೆಯ ಐತಿಹಾಸಿಕ ವಿದ್ಯಮಾನವನ್ನು ಸಂಭ್ರಮದಿಂದ ಆಚರಿಸಲು ಭಕ್ತರು ಸಜ್ಜಾಗಿದ್ದಾರಲ್ಲದೆ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕ್ಷಣವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಶ್ರೀರಾಮಮಂದಿರ ಕುರಿತು ವಿಚಾರಗಳೇ ಚರ್ಚೆಯಲ್ಲಿದ್ದು, ಸೋಮವಾರ ಅಯೋಧ್ಯೆಯಲ್ಲಿ ಜರುಗುವ ವಿವಿಧ ಧಾರ್ಮಿಕ ವಿಧಾನಗಳತ್ತ ಜಿಲ್ಲೆಯ ಭಕ್ತರ ದೃಷ್ಟಿ ನೆಟ್ಟಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ನಗರದ ಪ್ರಮುಖ ದೇವಸ್ಥಾನಗಳು ಸೇರಿದಂತೆ ಜಿಲ್ಲೆಯಲ್ಲಿರುವ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆಗಳು, ಹೋಮ, ಹವನ, ಭಜನೆ, ಅನ್ನಸಂತರ್ಪಣೆ ಜರುಗಲಿವೆ.

ಇಲ್ಲಿನ ಕೋಟೆ ಮಲ್ಲೇಶ್ವರಸ್ವಾಮಿ, ಶ್ರೀಕನಕ ದುರ್ಗಮ್ಮ ದೇವಸ್ಥಾನ, ಕುಮಾರಸ್ವಾಮಿ ದೇವಸ್ಥಾನ, ಬಲಕುಂದಿ ಹಾಗೂ ಎತ್ತಿನಬೂದಿಹಾಳ್ ಕಟ್ಟೆಬಸವೇಶ್ವರ ದೇವಸ್ಥಾನಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಅಭಿಷೇಕ, ಅರ್ಚನೆ, ಎಲೆಪೂಜೆ, ಭಜನೆ, ಮಂಡಲಾರಾಧನೆ, ಶ್ರೀರಾಮಹವನ, ಶ್ರೀರಾಮ ದೀಪೋತ್ಸವ, ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಜಿಲ್ಲೆಯ ನಗರ ಹಾಗೂ ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದ್ದು, ಕೇಸರಿ ಬಣ್ಣದ ಧ್ವಜಗಳು, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ವಿವಿಧ ಸಂಘ- ಸಂಸ್ಥೆಗಳು ಹಾಗೂ ಶ್ರೀರಾಮಭಕ್ತ ಮಂಡಳಿಗಳು ಶ್ರೀರಾಮನ ಬೃಹತ್ ಕಟೌಟ್‌ಗಳನ್ನು ನಿರ್ಮಿಸಿವೆ.

ನಗರದ ಪ್ರಮುಖ ವೃತ್ತಗಳಲ್ಲಿ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿವೆ. ಶ್ರೀರಾಮನ ಭಾವಚಿತ್ರವುಳ್ಳ ಕೇಸರಿ ಧ್ವಜಗಳಿಗೆ ಭಾರೀ ಬೇಡಿಕೆಯಿದ್ದು, ನಗರದ ನಾನಾ ರಸ್ತೆಗಳಲ್ಲಿ ಧ್ವಜಗಳು, ಕೇಸರಿ ಶಾಲು, ಟೀ- ಶರ್ಟ್‌ಗಳನ್ನು ಯುವಕರು, ಮಹಿಳೆಯರು, ಮಕ್ಕಳು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಶ್ರೀರಾಮಮಂದಿರ ಉದ್ಘಾಟನೆಯ ಐತಿಹಾಸಿಕ ದಿನವಾದ ಸೋಮವಾರ ನಗರದ ವಿವಿಧ ಸಂಘ- ಸಂಸ್ಥೆಗಳು ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿವೆ.

ಮನೆಮನೆಗೆ ಮಂತ್ರಾಕ್ಷತೆ: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಮಭಕ್ತರು ನಗರದ ಮನೆಮನೆಗೆ ತೆರಳಿ ಮಂತ್ರಾಕ್ಷತೆ ತಲುಪಿಸುತ್ತಿದ್ದು, ಸೋಮವಾರ ಸಂಜೆ ಮನೆಯ ಮುಂದೆ ದೀಪಗಳನ್ನು ಬೆಳಗಿಸಿ ರಾಮಜಪ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇಡೀ ದೇಶದಲ್ಲಿ ರಾಮನ ಸ್ಮರಣೆ ನಡೆಯುತ್ತಿದೆ. ನೀವು ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳಿ. ವರ್ಷದೊಳಗೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ.

ಶ್ರೀರಾಮಮಂದಿರ ಉದ್ಘಾಟನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಗೆ ತೆರಳುವ ಭಕ್ತರಿಗೆ ರೈಲು ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಮೈಸೂರಿನಿಂದ ಹೊರಡುವ ರೈಲುಗಳು ಹೊಸಪೇಟೆ, ಬಳ್ಳಾರಿ ಮೂಲಕ ಅಯೋಧ್ಯೆಗೆ ತೆರಳಿವೆ. ಪ್ರಸಾದ ವಿತರಣೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಪೂಜಾ ಕೈಂಕರ್ಯಗಳು, ಹೋಮ, ಹವನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದರು.

ಸಂಭ್ರಮ: ಅಯೋಧ್ಯೆಯಲ್ಲಿ ಜರುಗುವ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ. ಭಾರತೀಯರ ಕನಸು ನನಸಾಗುವ ಈ ಹೊತ್ತಿನಲ್ಲಿ ಇಡೀ ದೇಶ ಸಂಭ್ರಮಿಸುತ್ತಿದೆ. ನಾವೂ ಸಂಭ್ರಮದಲ್ಲಿದ್ದೇವೆ ಎನ್ನುತ್ತಾರೆ ವಿದ್ಯಾನಗರ ನಿವಾಸಿಗಳಾದ ವಿಜಯಶೇಖರ್, ಮಾರುತಿ ಹಾಗೂ ವಿಘ್ನೇಶ್.

Share this article