ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
ಕುಮಟಾ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರೊಂದಿಗೆ ಬುಧವಾರ ಸಭೆ ನಡೆಸಿದ ಸಿಪಿಐ ಯೋಗೇಶ ಕೆ.ಎಂ., ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ತಿಳಿವಳಿಕೆ ಹಾಗೂ ಅಗತ್ಯ ಸೂಚನೆಗಳನ್ನು ನೀಡಿದರು.
ಪ್ರಮುಖ ಪ್ರವಾಸಿ ತಾಣಗಳಲ್ಲಿನ ಹೋಮ್ ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿ, ಅನುಮತಿ ಪಡೆಯಬೇಕು. ಪೊಲೀಸರಿಂದ ಅಥವಾ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಹೋಮ್ ಸ್ಟೇ, ರೆಸಾರ್ಟ ಮಾಲೀಕರೇ ಜವಾಬ್ದಾರರು ಎಂದು ಸಿಪಿಐ ಯೋಗೇಶ ಕೆ. ಎಂ. ತಿಳಿಸಿದರು.
ಮುಖ್ಯವಾಗಿ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರ ವಿವರ ದಾಖಲಿಸಿಕೊಳ್ಳಬೇಕು. ವಿದೇಶಿ ಪ್ರವಾಸಿಗರ ಪಾಸ್ ಪೋರ್ಟ್, ವೀಸಾ, ವಿದೇಶಿ ಸಿ- ಫಾರ್ಮನ್ನು ಠಾಣೆಗೆ ನೀಡಬೇಕು. ವಿದೇಶಿ ಪ್ರವಾಸಿಗರು ಹೋಂಸ್ಟೇ, ರೆಸಾರ್ಟ್‌ನಿಂದ ಚೆಕ್‌ಔಟ್ ಆಗಿ ಹೋಗುವಾಗ ಅವರ ಮುಂದಿನ ಗಮ್ಯವನ್ನು ಸಿ-ಫಾರ್ಮ ಪೋರ್ಟಲ್‌ನಲ್ಲಿ ಮಾಹಿತಿ ತುಂಬಿಸಿ ಅದರ ದಾಖಲೆಯನ್ನು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವಿದೇಶಿ ಪ್ರವಾಸಿಗರೊಂದಿಗೆ ಸೌಜನ್ಯದ ವರ್ತನೆ, ರಾತ್ರಿಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುವುದು. ಮುಂಜಾಗ್ರತೆಯಾಗಿ ನುರಿತ ಈಜುಗಾರ ಸಿಬ್ಬಂದಿ ನೇಮಕ, ಲೈಪ್ ಜಾಕೆಟ್ ಬಳಕೆ, ಸೂಚನಾ ಫಲಕಗಳ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ ಮುಂತಾದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.