ಮಕ್ಕಳಲ್ಲಿನ ಪ್ರತಿಭೆ ಹೊರ ತೆಗೆಯಲು ಮೇಳಗಳು ಸಹಕಾರಿ: ಶಾಸಕ ಎಚ್.ಸಿ.ಬಾಲಕೃಷ್ಣ

KannadaprabhaNewsNetwork |  
Published : Feb 20, 2026, 01:15 AM IST
5.ಕುದೂರು ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿರುವ ರಂಗಣ್ಣ ಸಭಾಂಗಣದಲ್ಲಿ ನಡೆದ  ಮಕ್ಕಳ ಕನ್ನಡ ಸಾಹಿತ್ಯ ಮೇಳ ಕಾರ್ಯಕ್ರಮವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಮತ್ತು ಕನ್ನಡ ಕವಿಗಳ ಕುರಿತು ತಿಳಿದುಕೊಂಡಿದ್ದಕ್ಕೆ ಇಂತಹ ಉತ್ತಮ ಸ್ಥಾನ ದೊರಕಿದೆ. ಇನ್ನು ಇದನ್ನು ಆಳವಾಗಿ ಅಧ್ಯಯನ ಮಾಡಿದರೆ ನಮ್ಮ ಮನಸ್ಸು ಮತ್ತಷ್ಟು ವಿಕಾಸಗೊಂಡು ನಾವೂ ಕೂಡಾ ಬರವಣಿಗೆ ಮಾಡಬಹುದು.

ಕನ್ನಡಪ್ರಭ ವಾರ್ತೆ ಕುದೂರು

ಪ್ರತಿ ಮಗುವಿನಲ್ಲೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಇಂತಹ ಮೇಳಗಳು ತುಂಬಾ ಪರಿಣಾಮಕಾರಿಯಾಗಿ ಮಾಡುತ್ತಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಕುದೂರು ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿರುವ ರಂಗಣ್ಣ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ಕನ್ನಡ ಸಾಹಿತ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಕಲಿಯಲೇಬೇಕು ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಇಂಗ್ಲಿಷ್ ಭಾಷೆಯನ್ನು ಜೊತೆಯಲ್ಲಿ ಕಲಿಯಬೇಕು. ಏಕೆಂದರೆ ಇಂದು ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಬೇಕಾದರೆ ಇಂಗ್ಲಿಷ್ ಭಾಷೆ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆದರೆ, ಇದರಲ್ಲಿರುವ ಸೌಂದರ್‍ಯ ಏನೆಂದರೆ ಕನ್ನಡವನ್ನು ಸರಿಯಾಗಿ ಕಲಿಯದೇ ಹೋದರೆ ಇಂಗ್ಲಿಷ್ ಪರಿಣಾಮಕಾರಿಯಾಗಿ ಒಲಿಯುವುದಿಲ್ಲ. ಇದಕ್ಕಾಗಿ ಮೊದಲು ಮಾತೃಭಾಷೆಯನ್ನು ಚನ್ನಾಗಿ ಕಲಿಯಬೇಕು. ನಂತರ ಜಗತ್ತಿನ ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ಹೇಳಿದರು.

ಕೋರಮಂಗಲ ಅಭಯಕ್ಷೇತ್ರದ ಶ್ರೀಧರ್ ಗುರೂಜಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ. ನನ್ನ ಕಣ್ಣಿಗೆ ಇದುವರೆಗೂ ಯಾವ ಮಗುವೂ ದಡ್ಡಮಗುವಂತೆ ಕಂಡಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ ಎಂದು ತಿಳಿಸಿ, ತಮ್ಮ ಆಶ್ರಮದಲ್ಲಿ ತರಬೇತಿ ಕೊಡುತ್ತಿರುವ ಗಾಂಧಾರಿ ವಿದ್ಯೆಯ ಮಹತ್ವ ತಿಳಿಸಿ ಮಗುವಿನ ಕಣ್ಣಿಗೆ ಬಟ್ಟೆ ಕಟ್ಟಿ ವಸ್ತುಗಳನ್ನು ಗುರುತಿಸುವುದರ ಜೊತೆಗೆ ಬರಹಗಳನ್ನು ಓದಬಹುದು ಎಂಬುದನ್ನು ಪ್ರಾತ್ಯಕ್ಷಿತೆ ಮಾಡಿ ತೋರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಕುದೂರು ಗ್ರಾಮ ಮೊದಲಿನಿಂದಲೂ ಸಾಂಸ್ಕೃತಿಕ ರಾಜಧಾನಿಯಂತೆ ಕೆಲಸ ಮಾಡುತ್ತಿದೆ. ಜಿಲ್ಲೆಯ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನ ಆಗುತ್ತಿರುವುದು ಖುಷಿಯ ವಿಷಯ. ಮಕ್ಕಳು ಚಿಕ್ಕಂದಿನಿಂದಲೇ ಕನ್ನಡ ಸಾಹಿತ್ಯವನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯ ಮತ್ತೊಂದು ಸುಂದರವಾದ ಮಜಲು ಪರಿಚಯವಾಗುತ್ತದೆ ಎಂದು ಹೇಳಿದರು.

ಮೇಳಾಧ್ಯಕ್ಷೆ ವಿಷ್ಣು ವಲ್ಲಭ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಕನ್ನಡ ಕವಿಗಳ ಕುರಿತು ತಿಳಿದುಕೊಂಡಿದ್ದಕ್ಕೆ ಇಂತಹ ಉತ್ತಮ ಸ್ಥಾನ ದೊರಕಿದೆ. ಇನ್ನು ಇದನ್ನು ಆಳವಾಗಿ ಅಧ್ಯಯನ ಮಾಡಿದರೆ ನಮ್ಮ ಮನಸ್ಸು ಮತ್ತಷ್ಟು ವಿಕಾಸಗೊಂಡು ನಾವೂ ಕೂಡಾ ಬರವಣಿಗೆ ಮಾಡಬಹುದು ಎಂದು ಹೇಳಿದರು.

ಸುಗ್ಗನಹಳ್ಳಿ ಶಾಲೆಯ ತನುಶ್ರೀ ಮಾತನಾಡಿ, ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಅವಕಾಶಗಳಿಗಾಗಿ ಹುಡುಕಾಡುವ ತೊಂದರೆಯಿಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ ಅವಕಾಶಗಳು ತಂತಾನೆ ಬರುತ್ತವೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಚಂದ್ರಶೇಖರ್ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನ ನನಗೆ ಹೊಸ ಅನುಭವ ನೀಡಿದೆ. ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವನ್ನು ಶಾಲೆಯೊಳಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಶ್ರಮಿಸಬಹುದು ಎಂಬ ಅಂಶ ನನಗೆ ಪ್ರೇರಣೆ ನೀಡಿದೆ ಎಂದು ಹೇಳಿದರು

ಅಣಕು ಸಾಹಿತಿ ರಾಮನಾಥ್, ಅಣುಕು ಹಾಡುಗಳನ್ನು ಹಾಡಿ ರಂಜಿಸಿದರು ಮತ್ತು ಕನ್ನಡ ಬಳಸುವಾಗ ಮಾಡುವ ತಪ್ಪುಗಳನ್ನು ವಿನೋದವಾಗಿ ತಿಳಿಸಿ ಸರಿಪಡಿಸುವ ಕೆಲಸ ಮಾಡಿದರು.

ಕುದೂರು ಹೋಬಳಿ ಕಸಾಪ ಅಧ್ಯಕ್ಷ ಪದ್ಮನಾಭ್. ಮಾಜಿ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಸಂಚಾಲಕ ಚಂದ್ರಶೇಖರ್, ಇಸಿಒ ಗಂಗಾಧರ್, ಮಂಜುನಾಥ್, ಮಲ್ಲೂರ್ ಲೋಕೇಶ್, ಮಂಜೇಶ್, ಯತೀಶ್, ಹನುಮಂತರಾಯಪ್ಪ ಮತ್ತಿತರರು ಹಾಜರಿದ್ದರು.

----------

ಗಮನ ಸೆಳೆದ ಶಾಸಕರು - ಮಕ್ಕಳ ಸಂವಾದ :

ಮಕ್ಕಳ ಕನ್ನಡ ಸಾಹಿತ್ಯ ಮೇಳದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣರವರು ಶಾಲಾ ವಿದ್ಯಾರ್ಥಿಗಳಿಗೊಂದಿಗೆ ನಡೆಸಿದ ಸಂವಾದ ಗಮನ ಸಳೆಯಿತು.

ಮಕ್ಕಳ ಭಾವನಾತ್ಮಕ ಮಟ್ಟ ಕುಸಿಯುತ್ತಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಪ್ರೌಢಶಾಲೆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ, ಮಕ್ಕಳು ಹೆಚ್ಚಾಗಿ ತಂದೆ- ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆಯಬೇಕು. ಆದರೆ ಇಂದು ಅದಾಗದೆ ಹೆಚ್ಚು ಕಾಲ ಮೊಬೈಲ್‌ನಲ್ಲಿ ಮುಳುಗಿರುವುದರಿಂದ ಮಕ್ಕಳಲ್ಲಿ ಭಾವುಕತೆಯ ಮಟ್ಟ ನಿಜಕ್ಕೂ ಕುಸಿಯುತ್ತಿದೆ ಎಂದು ಉತ್ತರಿಸಿದರು.

ಶೌಚಾಲಯ ಅಚ್ಚುಕಟ್ಟು ಮಾಡೋದರಲ್ಲಿ ತಪ್ಪೇನಿದೆ?:

ಶಾಲೆಗಳಲ್ಲಿ ಶೌಚಾಲಯ ಅಚ್ಚುಕಟ್ಟಾಗಿ ಇರುವುದಿಲ್ಲ ನೀವೇಕೆ ಸದನದಲ್ಲಿ ಮಾತನಾಡಿ ಅದನ್ನು ಅಚ್ಚುಕಟ್ಟುಗೊಳಿಸಲು ಸಿಬ್ಬಂದಿಯನ್ನು ನೇಮಕ ಮಾಡಲು ಹೇಳಬಾರದು ಎಂಬ ಪ್ರಶ್ನೆಗೆ, ನಮ್ಮ ಮನೆಯ ಶೌಚಾಲಯವನ್ನು ನಾವು ಅಚ್ಚುಕಟ್ಟುಗೊಳಿಸುವುದನ್ನು ಕಲಿಯಬೇಕು. ಅದರಂತೆ ಶಾಲೆಯ ಶೌಚಾಲಯವೂ ನಮ್ಮದೇ ಆಗಿರುವುದರಿಂದ ಅದನ್ನು ನಾವುಗಳೇ ಅಚ್ಚುಕಟ್ಟುಗೊಳಿಸಿದರೆ ಆಗುವ ತೊಂದರೆಯಾದರೂ ಏನೆಂದು ಕೇಳಿದರು.

ಮಕ್ಕಳೇನಾದರೂ ಶೌಚಾಲಯದಲ್ಲಿ ಪೊರಕೆ ಹಿಡಿದು ನಿಂತರೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುತ್ತದೆ. ಪೋಷಕರು ಶಾಲೆಯ ಬಳಿ ಬಂದು ಗಲಾಟೆ ಮಾಡುತ್ತಾರೆ. ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಶಾಲೆಯ ಶೌಚಾಲಯವನ್ನು ನಾವುಗಳೇ ಅಚ್ಚುಕಟ್ಟು ಮಾಡುತ್ತಿದ್ದೆವು. ಈಗ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟು ಇರುವುದರಿಂದ ಡಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಯಾದರೆ ಶಿಕ್ಷಣ ಕ್ಷೇತ್ರಕ್ಕೆ ಏನು ಮಾಡುತ್ತೀರಿ ಎಂದು ಮಗುವೊಂದು ಕೇಳಿದ ಪ್ರಶ್ನೆಗೆ, ನಗುತ್ತಾ ಅಯ್ಯೋ ಇನ್ನೂ ಮಂತ್ರಿನೇ ಆಗಿಲ್ಲ. ಆಗಲೇ ಮುಖ್ಯಮಂತ್ರಿಯಾದರೆ ಏನು ಮಾಡುತ್ತೀರಿ ಅಂತ ಕೇಳ್ತಿಯಲ್ಲಮ್ಮ ಎಂದು ನಗೆಯಲ್ಲೇ ಉತ್ತರಿಸಿದರು.

ಮಕ್ಕಳಿಗೆ ಬೈಸಿಕಲ್ ಕೊಡುವುದನ್ನು ಏಕೆ ನಿಲ್ಲಿಸಿದ್ದೀರಿ ಮತ್ತೆ ಅದನ್ನು ಪ್ರಾರಂಭಿಸಿ ಎಂದು ನಾನು ಸದನದಲ್ಲಿ ಮಾತನಾಡುತ್ತೇನೆ ಎಂದು ಮಕ್ಕಳಿಗೆ ಬಾಲಕೃಷ್ಣರವರು ಆಶ್ವಾಸನೆ ನೀಡಿದರು.

------

ವಿವಿಧ ವೇಷಭೂಷಣ ತೊಟ್ಟು ಮೆರವಣಿಗೆ

ಮಕ್ಕಳ ಕನ್ನಡ ಸಾಹಿತ್ಯ ಮೇಳದಲ್ಲಿ ಮಕ್ಕಳ ವ್ಯಾಪಾರ ಮಳಿಗೆಗಳಲ್ಲಿ ತರಕಾರಿ, ಹಣ್ಣು ಮತ್ತು ತಿಂಡಿಗಳನ್ನು ಮಾರಾಟ ಮಾಡಿ ಸಮ್ಮೇಳನಕ್ಕೆ ಮೆರುಗು ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ಅನಾಹುತದಿಂದ ಹೇಗೆ ಪಾರಾಗಬಹುದು ಎಂಬುದನ್ನು ಮಕ್ಕಳಿಗೆ ವೇದಿಕೆಯ ಮುಂಭಾಗದ ಮೈದಾನದಲ್ಲಿ ಪ್ರಾತ್ಯಕ್ಷಿತೆ ಮಾಡಿ ತೋರಿಸಿದರು. ಗ್ರಾಮದೆಲ್ಲೆಡೆ ಮಕ್ಕಳ ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮೂರು ದಿನ ಫಲಪುಷ್ಪ ಪ್ರದರ್ಶನ: ಜಿಪಂ ಸಿಇಒ ಡಾ.ಆಕಾಶ್
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮರಳಿ ತರಲು ಆಗ್ರಹ