ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ಕಲ್ಲಂಡೂರಿನಲ್ಲಿ ಜನತಾದಳ (ಸಂಯುಕ್ತ) ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷಕ್ಕೆ ಸೇರಲು ಜನರೇ ಮುಂದೆ ಬಂದು ಅರ್ಜಿ ಹಾಕುವ ರೀತಿ ಪಕ್ಷ ಕಟ್ಟಬೇಕು. ಸಿದ್ಧಾಂತದ ಆಧಾರದ ಮೇಲೆ ಹಾಗೂ ಜನರು ನಮ್ಮ ಪಕ್ಷದತ್ತ ವಾಲುವಂಥ ರೀತಿಯಲ್ಲಿ ಪಕ್ಷ ಕಟ್ಟಬೇಕು.ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈಗಿನ ರಾಜಕಾರಣ ಎಂದರೆ ಹಳಿ ತಪ್ಪಿದ ರೈಲು ಇದ್ದಂತೆ. ನಾವೆಲ್ಲಾ ಆ ರೈಲು ಹತ್ತಿದ್ದೇವೆ, ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂದರೆ ಪರಸ್ಪರ ಬೈಯ್ದುಕೊಳ್ಳುವುದೇ ಆಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜೆಡಿಯು ಪಕ್ಷದಿಂದ ಮಾಡಬೇಕಿದೆ. ಪಾಪದ ದಿಕ್ಕಿಗೆ ಹೋಗದೆ ಜನರಿಗೆ ಒಳ್ಳೆಯದನ್ನು ಮಾಡುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ನುಡಿದರು.ಈಗ ಬರೀ ಪ್ರತಿಕ್ರಿಯಾತ್ಮಕ ಆಲೋಚನೆ ನಡೆಯುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಯಾವುದೋ ಘಟನೆಗೆ ನಾವು ಪ್ರತಿಕ್ರಿಯಿಸುತ್ತಿದ್ದೇವೆ. ಪರಸ್ಪರ ದೂಷಣೆಗಿಂತ ನಾವು ರಾಜ್ಯಕ್ಕೆ ಏನು ಕೊಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ, ಸಾವಯವ ಕೃಷಿ ಹಾಗೂ ಪರಿಸರದ ಬಗ್ಗೆ ಚಿಂತಿಸಬೇಕಿದೆ. ಪ್ರಕೃತಿ ಕಡೆ ಗಮನ ಹರಿಸಬೇಕಿದೆ. ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಭ್ರಷ್ಟಾಚಾರ ರಹಿತ ಆಡಳಿತದ ಗುರಿ ನಮ್ಮದು. ಸರ್ವೋದಯದ ಧ್ಯೇಯಗಳಾದ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಪರಿಸರ ಜನರಿಗೆ ಬೇಕು. ವಾಯುಮಾಲಿನ್ಯದ ಕಾರಣ ಶ್ವಾಸಕೋಶದ ಕಾಯಿಲೆ ಬರುತ್ತಿದೆ. ಮುಂದಿನ ಪೀಳಿಗೆ ಈ ಸಮಸ್ಯೆಗೆ ಒಳಗಾಗಬಾರದು. ರಾಸಾಯನಿಕ ಹಾಕಿ ಬೆಳೆದ ತರಕಾರಿಯಿಂದ ವಿವಿಧ ರೋಗ ಬರುತ್ತಿವೆ. ಹೀಗಾಗಿ, ಸಾವಯವ ಕೃಷಿಗೆ ಒತ್ತು ನೀಡಬೇಕಿದೆ. ಈ ಐದು ಅಂಶ ಇಟ್ಟುಕೊಂಡು ರಾಜ್ಯದಲ್ಲಿ ಜೆಡಿಯು ಪಕ್ಷ ಪುನಶ್ಚೇತನಗೊಳಿಸುವ ಕೆಲಸ ನಡೆಯುತ್ತಿದೆ. ಪಕ್ಷವನ್ನು ಎಲ್ಲಾ ವರ್ಗದವರು ಸೇರಿ ಕಟ್ಟಲು ಸಂಕಲ್ಪ ಮಾಡಲಾಗಿದೆ. ಸದಸ್ಯರಾಗಿ ಪಕ್ಷಕ್ಕೆ ದುಡಿಯಬೇಕಿದೆ ಎಂದು ಹೇಳಿದರು.
ಜೆಡಿಯು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಮಾತನಾಡಿ, ಮೊದಲು ನಾವೆಲ್ಲಾ ಹೊಸದಾಗಿ ಪಕ್ಷದ ಸದಸ್ಯರಾಗಬೇಕು. ಮುಂದೆ ನಾವು ಇರುವ ಸ್ಥಳಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದರು.
ಹಿರಿಯ ಉಪಾಧ್ಯಕ್ಷ ಸುಭಾಷ್ ಮಾತನಾಡಿ, ಸದಸ್ಯರಾಗುವುದು ಎಂದರೆ ಸಸಿ ನೆಟ್ಟಂತೆ. ಮುಂದೆ ಮರವಾಗಿ ಬೆಳೆಯಬಹುದು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮಾಡಿರುವ ಕೆಲಸಗಳು ನಮ್ಮ ಮುಂದೆ ಇವೆ. ಸದಸ್ಯರಾಗಿ ಪಕ್ಷ ಬಲಪಡಿಸಬೇಕು ಎಂದು ಸಲಹೆ ನೀಡಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕಚೇರಿಗಳಲ್ಲಿ ಏನೇ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಭ್ರಷ್ಟಾಚಾರ ತೊಲಗಬೇಕು, ದೇಶದ ಅಭಿವೃದ್ಧಿಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.