ವಸ್ತು ಪ್ರದರ್ಶನಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಳ: ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ

KannadaprabhaNewsNetwork | Published : Jan 23, 2025 12:47 AM

ಸಾರಾಂಶ

ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಒಟ್ಟು 344 ಮಕ್ಕಳು ಭಾಗವಹಿಸಿ ಕನ್ನಡ, ಇಂಗ್ಲಿಷ್, ಗಣಿತ ,ವಿಜ್ಞಾನ, ಸಮಾಜ ಎಲ್ಲಾ ವಿಷಯಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಮಕ್ಕಳಿಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ಮಕ್ಕಳು ತಾವು ತಯಾರಿಸಿದ ವಸ್ತುಗಳ ಬಗ್ಗೆ ಉತ್ಸುಕತೆಯಿಂದ ವಿವರಣೆ ಕೊಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಅವರಿಗೆ ಮೇಧಾ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚುವ ಜೊತೆಗೆ ಅವರ ಮುಂದಿನ ಭವಿಷ್ಯವೂ ಉತ್ತಮವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಅಭಿಪ್ರಾಯಪಟ್ಟರು. ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಯುಕೆಜಿ- 7ನೇ ತರಗತಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ವಿವಿಧ ಆಕರ್ಷಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ‘ನೋಡಿ ತಿಳಿ ಮಾಡಿ ಕಲಿ’ ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಉತ್ತಮಗೊಳ್ಳಲು ಇಂತಹ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದರು.

ವಸ್ತು ಪ್ರದರ್ಶನಗಳ ಆಯೋಜನೆಯಿಂದ ಮಕ್ಕಳಲ್ಲಿ ಗ್ರಹಿಕಾ ಶಕ್ತಿ ಪರಿಕಲ್ಪನೆ ಹೆಚ್ಚುತ್ತದೆ. ಮಕ್ಕಳಿಂದಲೇ ಕಲಿಕಾ ಉಪಕರಣಗಳನ್ನು ತಯಾರಿಸಿ ಅವರಿಂದಲೇ ವಿವರಣೆ ಪಡೆದಾಗ ಅವರ ಮೇಧಾ ಶಕ್ತಿ, ಜ್ಞಾಪಕ ಶಕ್ತಿ ಉನ್ನತಗೊಳ್ಳುತ್ತದೆ ಎಂದು ತಿಳಿಸಿದರು.

ಒಬ್ಬ ಶಿಕ್ಷಕನ ಬೋಧನೆಯಿಂದ ಕೇವಲ ಶೇ.5ರಷ್ಟು ಕಲಿಕೆ, ಅದನ್ನೇ ಪುಸ್ತಕದಲ್ಲಿ ಓದುವುದರಿಂದ ಶೇ.10 ರಷ್ಟು ಕಲಿಕೆ, ಪ್ರಯೋಗದ ರೂಪದಲ್ಲಿ ಮಾಡಿ ಕಲಿ ಎಂಬಂತೆ ಮಕ್ಕಳು ತಾವೇ ಸ್ವತಃ ವಸ್ತುಗಳನ್ನು ತಯಾರಿಸಿದರೆ ಶೇ.30ರಷ್ಟು ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಅದನ್ನೇ ಬೇರೆಯವರಿಗೆ ವಿವರಣೆ ರೂಪದಲ್ಲಿ ತಿಳಿಸಿದಾಗ ಶೇ.90ರಷ್ಟು ಕಲಿಕೆಯಾಗುತ್ತದೆ ಎಂದು ಹೇಳಿದರು.

ಬೇರೆಯವರಿಗೆ ಬೋಧನೆ ಮಾಡುವಷ್ಟು ಕಲಿಕಾ ಸಾಮರ್ಥ್ಯ ಪಡೆಯುವ ಜೊತೆಗೆ ಗರಿಷ್ಠ ಮಟ್ಟದ ಜ್ಞಾನ ಸಂಪಾದಿಸಬಹುದು. ಫೆ.28ರಂದು ವಿಜ್ಞಾನ ದಿನದಂದು ತಾಲೂಕು ಮಟ್ಟದಲ್ಲಿ ಕಲಿಕಾ ಉಪಕರಣಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಅದರಲ್ಲಿ ಶಿಕ್ಷಕರು ತಮ್ಮ ಮಕ್ಕಳಿಂದ ಉತ್ತಮ ಕಲಿಕಾ ಉಪಕರಣಗಳನ್ನು ತಯಾರಿಸಿ ಪ್ರದರ್ಶನ ಮಾಡಬಹುದು ಎಂದು ತಿಳಿಸಿದರು.

ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಒಟ್ಟು 344 ಮಕ್ಕಳು ಭಾಗವಹಿಸಿ ಕನ್ನಡ, ಇಂಗ್ಲಿಷ್, ಗಣಿತ ,ವಿಜ್ಞಾನ, ಸಮಾಜ ಎಲ್ಲಾ ವಿಷಯಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಮಕ್ಕಳಿಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ಮಕ್ಕಳು ತಾವು ತಯಾರಿಸಿದ ವಸ್ತುಗಳ ಬಗ್ಗೆ ಉತ್ಸುಕತೆಯಿಂದ ವಿವರಣೆ ಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪ್ರೌಢಶಾಲಾ ಮಟ್ಟದಲ್ಲಿ ವಸ್ತು ಪ್ರದರ್ಶನ ಸಾಮಾನ್ಯ ,ಆದರೆ ಪ್ರಾಥಮಿಕ ಶಾಲಾ ಮಟ್ಟದಲ್ಲಿ ವಸ್ತುಗಳ ಮಾದರಿಯನ್ನು ತಯಾರಿಸಿ ಪ್ರದರ್ಶನ ಏರ್ಪಡಿಸುವುದು ವಿಶೇಷ. ಇದಕ್ಕೆ ಶಿಕ್ಷಕರು ತುಂಬಾ ಶ್ರಮ ಪಟ್ಟಿದ್ದಾರೆ ಅವರಿಗೆ ಅಭಿನಂದನೆಗಳು. ವಿಜ್ಞಾನ ವಿಷಯವನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು. ಅದನ್ನು ಹುಟ್ಟು ಹಾಕಲು ಅಥವಾ ನಾಶ ಮಾಡಲು ಸಾಧ್ಯವಿಲ್ಲ. ಕೇವಲ ರೂಪ ಬದಲಿಸಬಹುದು ಎಂದು ಉದಾಹರಣೆ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಅನುರಾಧ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸೋಮಣ್ಣ , ಎಸ್ ಡಿಎಂಸಿ ಸದಸ್ಯರಾದ ಮಂಜು, ಆನಂದ್, ಶೋಭಾ , ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಕುಳ್ಳಯ್ಯ, ಪ್ರದೀಪ್ ಕುಮಾರ್ ಎಂ.ಪಿ., ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೃಷ್ಣ, ಸಹ ಶಿಕ್ಷಕಿ ನಂದಕುಮಾರಿ, ಜಿ.ಎಸ್.ಬೋರೇಗೌಡ, ತಿಮ್ಮಯ್ಯ ಕಾತ್ಯಾಯಿನಿ, ಚಿಕ್ಕರಾಜು, ಶಶಿಕಲಾ, ಮೋನಿಷ, ಕೋಮಲ ಸೇರಿದಂತೆ ಇತರರು ಇದ್ದರು.

Share this article