ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಮೇಲುಕೋಟೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ವಸಂತಪುರ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಕೋತಿಗಳ ಹಿಂಡು ಆಗಮಿಸಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದವು. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಗ್ರಾಮಸ್ಥರ ಮೇಲೆ ದಾಳಿ ಮಾಡಿ ಕಚ್ಚಿ ಪರಚುತ್ತಿದ್ದವು.
ಅಲ್ಲದೇ, ಮನೆಗಳ ಹೆಂಚುಗಳನ್ನು ಕಿತ್ತು ಒಡೆದು ಹಾಕಿ, ಮನೆಯೊಳಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಎತ್ತಿಕೊಂಡು ಹೋಗುತ್ತಿವೆ. ತೆಂಗಿನ ಮರಗಳಲ್ಲಿ ಎಳನೀರು ಬಿಡದೆ ದಾಂಧಲೆ ನಡೆಸುತ್ತಿದ್ದವು.ಕೋತಿಗಳ ಹಾವಳಿಯಿಂದಾಗಿ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಲು ಭಯ ಪಡುವ ಜೊತೆಗೆ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿ ಊಟಕ್ಕೂ ತೊಂದರೆ ನೀಡಿ ಬಿಸಿಯೂಟದ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.
ನಂತರ ಶಾಸಕ ಎಚ್.ಟಿ.ಮಂಜು ಕೋತಿಗಳಿಂದ ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲಿಸಿದರು. ಸಹಜವಾಗಿ ಕೋತಿಗಳು ಅರಣ್ಯ ಪ್ರದೇಶದಿಂದ ಆಗಮಿಸಿ ಗ್ರಾಮದಲ್ಲಿ ತಂಗಿವೆ. ಕೋತಿಗಳ ಹಾವಳಿ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಆಗಮಿಸಿ ಕಣ್ಣಾರೆ ಕಂಡಿದ್ದೇನೆ. ಇಲ್ಲಿ ಬೀಡುಬಿಟ್ಟಿರುವ ಕೋತಿಗಳ ಹಿಂಡನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಮೊಬೈಲ್ ಮೂಲಕ ಅರಣ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.