ಕ್ರೀಡೆಯಿಂದ ಮಾನಸಿಕ ನೆಮ್ಮದಿ

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಇಳಕಲ್ಲ: ಇಂದಿನ ದಣಿವರಿಯದ ನಮ್ಮ ಜೀವನದಲ್ಲಿ ನಮ್ಮ ಆರೋಗ್ಯ ರಕ್ಷಣೆ ಅತಿ ಅವಶ್ಯಕ. ಅದಕ್ಕಾಗಿ ನಾವು ಪ್ರತಿ ನಿತ್ಯ ಒಂದು ಗಂಟೆಯಾದರು ಯಾವುದಾದರು ಆಟದಲ್ಲಿ ತೊಡಗಬೇಕು. ಅದರಿಂದ ನಮ್ಮ ಆರೋಗ್ಯ ರಕ್ಷಣೆ ಜೊತೆಗೆ ಮಾನಸಿಕ ನೆಮ್ಮದಿ ದೊರೆಯುವುದು ಎಂದು ನಗರದ ಹಿರಿಯ ಗುರಣ್ಣ ಮರಟದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದಿನ ದಣಿವರಿಯದ ನಮ್ಮ ಜೀವನದಲ್ಲಿ ನಮ್ಮ ಆರೋಗ್ಯ ರಕ್ಷಣೆ ಅತಿ ಅವಶ್ಯಕ. ಅದಕ್ಕಾಗಿ ನಾವು ಪ್ರತಿ ನಿತ್ಯ ಒಂದು ಗಂಟೆಯಾದರು ಯಾವುದಾದರು ಆಟದಲ್ಲಿ ತೊಡಗಬೇಕು. ಅದರಿಂದ ನಮ್ಮ ಆರೋಗ್ಯ ರಕ್ಷಣೆ ಜೊತೆಗೆ ಮಾನಸಿಕ ನೆಮ್ಮದಿ ದೊರೆಯುವುದು ಎಂದು ನಗರದ ಹಿರಿಯ ಗುರಣ್ಣ ಮರಟದ ತಿಳಿಸಿದರು.

ಇಳಕಲ್ಲ ನಗರದ ಬಸವಾ ಬ್ಯಾಡ್ಮಿಂಟನ್ ಕ್ರಿಡಾಂಗಣದಲ್ಲಿ ಇಳಕಲ್ಲ ಲಯನ್ಸ್‌ ಸಂಸ್ಥೆಯವು ಆಯೋಜಿಸಿದ್ದ ಲಯನ್ಸ್‌ ವಲಯ ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾವಳಿ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸಧೃಡರಾಗಬೇಕು. ಕ್ರೀಡೆಗಳು ಮನುಷ್ಯನ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಸ್ಥಿರವಾಗಿರಿಸುತ್ತದೆ. ಅಲ್ಲದೇ ದಿನಪೂರ್ತಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಈ ಬ್ಯಾಡ್ಮಿಟನ್ ಆಟ ಮನುಷ್ಯನ ಎಲ್ಲ ಅಂಗಗಳಿಗೆ ಕೆಲಸ ಕೊಡುತ್ತದೆ. ಈ ಆಟದಿಂದ ನಿಮ್ಮ ಆರೋಗ್ಯ ಸುಧಾರಣೆ ಆಗುವುದು ಎಂದು ತಿಳಿಸಿದರು.

ಪ್ರೊ.ವಿ.ಕೆ.ವಂಶಾಕೃತಮಠ ಮಾತನಾಡಿ, ಡೆನ್ಮಾರ್ಕ್‌ ದೇಶದಲ್ಲಿ 18ನೇ ಶತಮಾನದಲ್ಲಿ ಪ್ರಾರಂಭವಾದ ಈ ಆಟ ಭಾರತಕ್ಕೆ ೧೯ನೇ ಶತಮಾನದಲ್ಲಿ ಚೀನಾದಿಂದ ಬಂತು. ಇಂದು ಭಾರತದಲ್ಲಿ ಜನಪ್ರಿಯ ಆಟಗಳಲ್ಲಿ ಬ್ಯಾಡ್ಮಿಟನ್ ಕೂಡ ಒಂದು. ಬ್ಯಾಡ್ಮಿಟನ್‌ಗೆ ಏಕಾಗ್ರತೆ ಹಾಗೂ ಅತೀ ಜಾಣ್ಮೆ ಅತೀ ಮುಖ್ಯ. ಇಳಕಲ್ಲ ಲಯನ್ಸ್‌ ಸಂಸ್ಥೆಯವರು ಪ್ರತಿ ತಿಂಗಳು ಒಂದೊಂದು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಜನರ ಮನಸ್ಸಿನಲ್ಲಿ ಸದಾ ಉಳಿದ ಸಂಸ್ಥೆ. ಇದರ ಅಧ್ಯಕ್ಷ ರಾಜಕುಮಾರ ಕಾಟವಾ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಜನ್ ಚೇರ ಪರ್ಸನ್ ಶಶಿಕಾಂತ ಜೋಶಿ, ಬೆಳಗಾವಿ ರಾಜಶೇಖರ ಹಿರೇಮಠ, ಲಯನ್ಸ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಮಠದ, ಕಾರ್ಯದರ್ಶಿ ಸಂತೋಷ ಪೂಜಾರ, ಕೋಶಾಧ್ಯಕ್ಷ ಏಕನಾಥ ರಾಜೋಳ್ಳಿ, ವಿಜಯಪುರ ಶಿವಕುಮಾರ ಗಡೇಶೆಟ್ಟಿ, ಇಳಕಲ್ಲಿನ ನರಶಿಂಹ ಸಾಕಾ, ಡಾ. ಮಹಾಂತೇಶ ಅಕ್ಕಿ, ವಿಶಾಲ ಜೃನ, ಡಾ. ಟಿಪ್ಪು ಸುಲ್ತಾನ ಭಂಡಾರಿ, ಡಾ. ಶ್ರೀಕಾಂತ ಸಾಕಾ ಸೇರಿದಂತೆ ಇತರರು ಇದ್ದರು. ಮುರಗೇಶ ಪಾಟೀಲ ಸ್ವಾಗತಿಸಿದರು. ರವಿ ಅಂಗಡಿ ವಂದಿಸಿದರು.

ಈ ಪಂದ್ಯಾವಳಿಯಲ್ಲಿ ಬೆಳಗಾವಿಯ ಮೂಡಲಗಿ ಲಯನ್ಸ್‌ ತಂಡ ಪ್ರಥಮ, ದ್ವಿತೀಯ ಸ್ಥಾನ ಮೂಡಲಗಿಯ ಯುವ ತಂಡ, ಹಾಗೂ ತೃತೀಯ ಸ್ಥಾನವನ್ನು ಇಳಕಲ್ಲ ಲಯನ್ಸ್‌ ತಂಡ ಪಡೆಯಿತು. ಗೋವಾದ ಪೋಂಡಾ ನಗರದ ಲಯನ್ಸ್‌ ತಂಡ ನಾಲ್ಕನೇ ಸ್ಥಾನ ಪಡೆಯಿತು.

Share this article