ಮಾನಸಿಕ ಸದೃಢತೆಯ ಅಗತ್ಯವಿದೆ: ನಿವೃತ್ತ ಸೇನಾಧಿಕಾರಿ ರಾಜು

KannadaprabhaNewsNetwork |  
Published : May 26, 2026, 02:30 AM IST
ಫೋಟೋ : ೨೪ಕೆಎಂಟಿ_ಎಂಎವೈ_ಕೆಪಿ೧ : ಸರಸ್ವತಿ ವಿದ್ಯಾಕೇಂದ್ರದಲ್ಲಿ ಅಗ್ನಿವೀರ ತರಬೇತಿಯ ಸಮಾರೋಪವನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಉದ್ಘಾಟಿಸಿದರು. ಡಾ. ಸುರೇಂದ್ರ ಕುಲಕರ್ಣಿ, ಮುರಲೀಧರ ಪ್ರಭು, ರಮೇಶ ಪ್ರಭು, ದಾಮೋದರ ಭಟ್, ಗುರುರಾಜ ಶೆಟ್ಟಿ, ಡಾ. ಸುರೇಶ ಹೆಗಡೆ ಇತರರು ಇದ್ದರು.   | Kannada Prabha

ಸಾರಾಂಶ

ಅಗ್ನಿವೀರ ತರಬೇತಿ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಕಷ್ಟದ ಸಂದರ್ಭಗಳಲ್ಲಿ ಶಾರೀರಿಕ ಕ್ಷಮತೆಯ ಜತೆಗೆ ಮಾನಸಿಕ ಸದೃಢತೆಯ ಅಗತ್ಯವಿದೆ.

ಒಂದು ತಿಂಗಳ ಅಗ್ನಿವೀರ ತರಬೇತಿ ಶಿಬಿರದ ಸಮಾರೋಪ

ಕನ್ನಡಪ್ರಭ ವಾರ್ತೆ ಕುಮಟಾ

ಅಗ್ನಿವೀರ ತರಬೇತಿ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಕಷ್ಟದ ಸಂದರ್ಭಗಳಲ್ಲಿ ಶಾರೀರಿಕ ಕ್ಷಮತೆಯ ಜತೆಗೆ ಮಾನಸಿಕ ಸದೃಢತೆಯ ಅಗತ್ಯವಿದೆ. ಕಠಿಣ ಪರಿಶ್ರಮ, ಶಿಸ್ತು ಹಾಗೂ ದೇಶಪ್ರೇಮ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಹೇಳಿದರು.

ರಾಷ್ಟ್ರ ನಿರ್ಮಾಣ ವೇದಿಕೆ, ಕೊಂಕಣ ಎಜುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ವತಿಯಿಂದ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಒಂದು ತಿಂಗಳ ಅಗ್ನಿವೀರ ತರಬೇತಿ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಗ್ನಿವೀರ ತರಬೇತಿಯ ಬಳಿಕ ಸೈನ್ಯ ಸೇರುವುದು ಒಂದು ಭಾಗವಾದರೆ, ಹೆಚ್ಚುವರಿ ಉಪಲಬ್ಧಿಯಾಗಿ ಬದುಕಿನ ಯಶಸ್ಸಿಗೆ ಬೇಕಾದ ಶಿಸ್ತು, ತಾಳ್ಮೆ, ಸಮಯಪಾಲನೆ, ಮಾನಸಿಕ ದೃಢತೆ, ಸವಾಲುಗಳನ್ನು ಎದುರಿಸುವ ಶಕ್ತಿಯ ಜತೆಗೆ ದೇಶಭಕ್ತಿಯನ್ನೂ ಬೆಳೆಸುತ್ತದೆ ಎಂದರು.

ವಿಜ್ಞಾನಿ ಡಾ. ಸುರೇಂದ್ರ ಕುಲಕರ್ಣಿ ಮಾತನಾಡಿ, ತರಬೇತಿಗೆ ಬಂದವರೆಲ್ಲರೂ ಸೈನಿಕರಾಗಿ ಆಯ್ಕೆಯಾಗುತ್ತಾರೆ ಎನ್ನಲಾಗದು. ಆದರೆ ಇಲ್ಲಿ ಕಲಿತ ಪಾಠಗಳು ಜೀವನದ ಪ್ರತಿಯೊಂದು ಹಂತದಲ್ಲೂ ಉಪಯೋಗಕ್ಕೆ ಬರುತ್ತವೆ. ಯಾವುದೇ ಕ್ಷೇತ್ರದ ಯಶಸ್ಸಿಗೆ ನೆರವಾಗುತ್ತದೆ ಎಂದರು.

ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡು, ಆರಂಭದಲ್ಲಿ ಕಠಿಣವೆನಿಸಿದ ತರಬೇತಿ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಿಸಿತು. ಇಲ್ಲಿನ ಊಟೋಪಚಾರ ಇತರ ವ್ಯವಸ್ಥೆಗಳು ನಿರೀಕ್ಷೆ ಮೀರಿ ಉತ್ತಮವಾಗಿದ್ದು, ತರಬೇತುದಾರರಿಂದ ಆತ್ಮೀಯ ಮಾರ್ಗದರ್ಶನ ಸಿಕ್ಕಿದೆ ಎಂದರು.ಕೊಂಕಣ ಎಜುಕೇಶನ್ ಟ್ರಸ್ಟ್‌ ಉಪಾಧ್ಯಕ್ಷ ದಾಮೋದರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಉಪಾಧ್ಯಕ್ಷ ರಮೇಶ್ ಪ್ರಭು, ಎಂ.ಡಬ್ಲು.ಒ ಶಾಂತಾರಾಮ ಭಟ್ಕೆರೆ, ರಾಷ್ಟ್ರ ನಿರ್ಮಾಣ ವೇದಿಕೆಯ ಸಂಯೋಜಕ ಡಾ. ಸುರೇಶ ಹೆಗಡೆ ಉಪಸ್ಥಿತರಿದ್ದರು.

ಕೊಂಕಣ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿಧರ ಪ್ರಭು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ತರಬೇತಿಯ ಸಂಯೋಜಕ ಗುರುರಾಜ ಶೆಟ್ಟಿ ತರಬೇತಿ ಶಿಬಿರದ ರೂಪುರೇಷೆ, ದೈಹಿಕ ಅಭ್ಯಾಸ, ದೇಶಭಕ್ತಿ ಚಟುವಟಿಕೆಗಳು, ಶಿಸ್ತು ಹಾಗೂ ಸಕ್ರಿಯ ಭಾಗವಹಿಸುವಿಕೆ ಕುರಿತು ವಿವರಿಸಿದರು.

ನಿವೃತ್ತ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ, ತರಬೇತುದಾರರಾದ ಗಜಾನನ ನಾಯ್ಕ ಹಾಗೂ ಗಿರೀಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ರಾಜ್ಯಕ್ಕೂ ಮುಖ್ಯ) ಪ್ರಗತಿಪರ ಚಿಂತನೆ ಯತಿ ವಿಶ್ವೇಶ ತೀರ್ಥರು: ಈಶ್ವರ ಖಂಡ್ರೆ
2015ರ ನಂತರದ ಒತ್ತುವರಿ ತೆರವಿಗೆ ಖಂಡ್ರೆ ಸೂಚನೆ