ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ ನೇಮಕ: ಅಧ್ಯಕ್ಷ ಹರೀಶ್‌ ಕುಮಾರ್‌

KannadaprabhaNewsNetwork |  
Published : Aug 31, 2026, 02:45 AM IST
ಹರೀಶ್‌ ಕುಮಾರ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡಿನ ಒಟ್ಟು ನಾಲ್ಕು ಜಿಲ್ಲೆಗಳನ್ನು ಹೊಂದಿರುವ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು: ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡಿನ ಒಟ್ಟು ನಾಲ್ಕು ಜಿಲ್ಲೆಗಳನ್ನು ಹೊಂದಿರುವ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 430 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಎರಡು ದಿನಗಳಲ್ಲಿ 395 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಪ್ರಸಕ್ತ ಉನ್ನತ ಒತ್ತಡದ ವಿದ್ಯುತ್ ಮಾರ್ಗಗಳ ನಿರ್ವಹಣೆಗೆ ಸಿಬ್ಬಂದಿ ಅಗತ್ಯವಿದೆ. ಹೊಸ ನೇಮಕಾತಿಯಿಂದ ಸಿಬ್ಬಂದಿ ಕೊರತೆ ಕಡಿಮೆಯಾಗಲಿದೆ. ಇನ್ನೂ ಸುಮಾರು 35 ಪವರ್‌ಮ್ಯಾನ್‌ಗಳ ಕೊರತೆಯಿದ್ದು, ಹೆಚ್ಚುವರಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಹೇಳಿದರು.

ಮಂಗಳೂರು, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 28.10 ಲಕ್ಷ ವಿದ್ಯುತ್ ಸಂಪರ್ಕಗಳು ಇದ್ದು, ಮನೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನೀರಾವರಿ ಪಂಪ್‌ಸೆಟ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದರು.

ಭೂಗತ ಕೇಬಲ್, ಲಿಂಕ್‌ಲೈನ್‌ಗೆ ಒತ್ತು: ಮಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜನ್ನು ಹೆಚ್ಚು ಸುರಕ್ಷಿತ ಹಾಗೂ ನಿರಂತರಗೊಳಿಸಲು ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಮತ್ತು ಲಿಂಕ್‌ಲೈನ್ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಭೂಗತ ಕೇಬಲ್‌ನಿಂದ ಅಪಘಾತಗಳ ಸಾಧ್ಯತೆ ಹಾಗೂ ಪ್ರಸರಣ ನಷ್ಟ ಕಡಿಮೆಯಾಗಲಿದೆ. ಅದಕ್ಕಾಗಿ ಉಳ್ಳಾಲ ಹಾಗೂ ಮಂಗಳೂರಿನ ಮಣ್ಣಗುಡ್ಡ, ಕಾವೂರು ವ್ಯಾಪ್ತಿಗಳಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಒಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದರೂ ಪರ್ಯಾಯ ಮಾರ್ಗದ ಮೂಲಕ ಸರಬರಾಜು ಮುಂದುವರಿಸಲು ಲಿಂಕ್‌ಲೈನ್ ನೆರವಾಗಲಿದೆ. ಕಡಂದಲೆಯಲ್ಲಿ 400 ಕೆವಿ ಸಬ್‌ಸ್ಟೇಷನ್‌ ಪೂರ್ಣಗೊಂಡು ಕಾರ್ಯಾರಂಭಿಸಿದಾಗ ಪ್ರಸ್ತುತ ಕೇಮಾರಿನ 220 ಕೆ.ವಿ. ಸಬ್‌ಸ್ಟೇಷನ್‌ ಸೇರಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆ ಸಾಧ್ಯವಾಗಲಿದೆ. ಅಲ್ಲದೆ ವಿದ್ಯುತ್‌ ಕಡಿತದಂತಹ ಸಮಸ್ಯೆಗಳು ದೂರವಾಗುವ ನಿರೀಕ್ಷೆ ಇದೆ ಎಂದರು. ಹೊಸ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ: ಹೊಸ ವಿದ್ಯುತ್ ಸಂಪರ್ಕಗಳಿಗೆ ಪ್ರೀ ಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಮಾದರಿಯಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಮೀಟರ್‌ ರೀಡರ್‌ನ ಅವಶ್ಯಕತೆ ಇಲ್ಲ. ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಳಕೆ, ದೈನಂದಿನ ಬಳಕೆಯ ಪ್ರಮಾಣ ಹಾಗೂ ಬಿಲ್ ವಿವರಗಳನ್ನು ಪರಿಶೀಲಿಸಬಹುದು. ಬಿಲ್ ಜನರೇಟ್‌ ಆಗದಿದ್ದರೂ ಆ್ಯಪ್ ಮೂಲಕ ಬಿಲ್ ಮಾಹಿತಿ ಪಡೆದು ಪಾವತಿಸಲು ಅವಕಾಶವಿದೆ. ಸ್ಮಾರ್ಟ್ ಮೀಟರ್‌ಗಳ ಗುಣಮಟ್ಟ ಪರಿಶೀಲನೆಗಾಗಿ ನಾಲ್ಕು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸ್ಮಾರ್ಟ್ ಮೀಟರ್ ವ್ಯವಸ್ಥೆಯಿಂದ ವಿದ್ಯುತ್ ಬಳಕೆಯ ನಿಖರ ಮಾಹಿತಿ ದೊರೆಯುವುದರ ಜೊತೆಗೆ ಸರಬರಾಜು ವ್ಯವಸ್ಥೆಯ ನಿರ್ವಹಣೆಯೂ ಸುಧಾರಿಸಲಿದೆ ಎಂದು ಕೆ. ಹರೀಶ್ ಕುಮಾರ್ ತಿಳಿಸಿದರು.

ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ದೀಪಕ್‌ ಇದ್ದರು.

ಮೆಸ್ಕಾಂ ಖಾಸಗೀಕರಣ ಇಲ್ಲ: ರಾಜ್ಯದಲ್ಲಿ ವಿದ್ಯುತ್‌ ಕಂಪನಿಗಳ ಖಾಸಗೀಕರಣ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಸೇರಿದಂತೆ ಎಲ್ಲ ಎಸ್ಕಾಂಗಳಲ್ಲಿ ನೌಕರರು ಹೋರಾಟ ನಡೆಸಿದ್ದು, ಇದಕ್ಕೆ ಸರ್ಕಾರ ಕೂಡ ಸಮ್ಮತಿಸಿದೆ. ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಹೂಡಿಕೆಗೆ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿರುವುದರಿಂದ ಈ ಗೊಂದಲ ಉಂಟಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ಹೊಸ ಅರ್ಜಿ ಸಲ್ಲಿಕೆಗೆ ಆ. 31 ಕೊನೆ ದಿನ. ಈಗಾಗಲೇ ಶೇ.99ರಷ್ಟು ಅರ್ಜಿ ಸಲ್ಲಿಕೆಯಾಗಿದೆ. ಕೆಲವರು ಸಬ್ಸಿಡಿ ತ್ಯಜಿಸಿ ಅರ್ಜಿ ಸಲ್ಲಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ಮನೆಗಳಿಗೆ ಆಗಮಿಸಿ ಅರ್ಜಿ ಪರಿಶೀಲನೆ ನಡೆಸಲಿದ್ದಾರೆ.

-ಹರೀಶ್‌ ಕುಮಾರ್‌, ಅಧ್ಯಕ್ಷರು, ಮೆಸ್ಕಾಂ ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಖ್ಯಾಬಲ ಕಾಂಗ್ರೆಸ್‌ಗಿದ್ದರೂ ಪಿಕಾರ್ಡ್ ಬ್ಯಾಂಕ್ ಗದ್ದುಗೆ ಬಿಜೆಪಿಗೆ!
ವೈಚಾರಿಕ ಚಿಂತನೆ ಬೆಳೆಸಲು ಅಂಬೇಡ್ಕರ್ ಓದು ಪ್ರೇರಣೆ: ಜಗದೀಶ್