ರಟ್ಟೀಹಳ್ಳಿ: ಕನ್ನಡದ ಮಹಾನ್ ದಾಸ ಶ್ರೇಷ್ಠರು, ಕವಿ ತತ್ವಜ್ಞಾನಿ ಆದಂತ ಭಕ್ತ ಕನಕದಾಸರು ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿಯ ಸಂದೇಶ ಇಂದಿಗೂ ಪ್ರಸ್ತುತ ಎಂದು ತಹಸೀಲ್ದಾರ್ ಜೆ. ಜಯರಾಮ್ ಹೇಳಿದರು.
ಕನಕ ದಾಸರು ತಮ್ಮ ದಾಸ ಸಾಹಿತ್ಯದ ಮೂಲಕ ಸಮಾಜದ ಅರಿವಿಗಾಗಿ ''''ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ'''' ಎಂದು ಜೀವನದ ತತ್ವ ಸಾರಿದ ಕನಕ ದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳುವ ಮೂಲಕ ಅವರ ವಿಚಾರಧಾರೆಗಳನ್ನು ಜಗತ್ತಿಗೆ ಸಾರೋಣ, ಆ ಮೂಲಕ ಇಂದಿನ ಹಾಗೂ ಮುಂಬರುವ ಪೀಳಿಗೆಗೆ ಅವರು ನೀಡಿದಂತ ದಾಸ ಸಾಹಿತ್ಯವನ್ನು ಅಜರಾಮರಗೊಳಿಸೋಣ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ಭಕ್ತ ಕನಕದಾಸರು ತಮ್ಮ ವಚನ ಸಾಹಿತ್ಯದ ಮೂಲಕ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಮಾರ್ಮಿಕವಾಗಿ ನುಡಿದ ಮಹಾನ್ ದೈವಿಭಕ್ತನಾಗಿದ್ದು ಅವರ ಸಂದೇಶದ ತಿರುಳನ್ನು ಅರಿತು ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೋಳಿಸದೇ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.ಉಪ ತಹಸೀಲ್ದಾರ್ ಜಗತಾಪ್, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ದೇವರಾಜ ಹಂಚಿನಮನಿ, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ , ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಮಲ್ಲಮ್ಮ ಕಟ್ಟೆಕಾರ, ಲಕ್ಷ್ಮಿ ಚಿಕ್ಕಮೊರಬ, ಬಸವರಾಜ ಕಟ್ಟಿಮನಿ, ರಾಜು ಬಟ್ಲಕಟ್ಟಿ, ಕಿರಣ ಆಡಿನವರ, ಶ್ರೀನಾವಸ ಬೈರಪ್ಪನವರ, ಹನಮಂತಪ್ಪ ಗಾಜೇರ, ರಮೇಶ ಕಟ್ಟೆಕಾರ ಹಾಗೂ ವಿವಿಧ ಗ್ರಾಮಗಳ ಸಮಾಜ ಮುಖಂಡರು ಹಾಗೂ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿಗಳು ಇದ್ದರು.
ತಾಲೂಕಿನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನಕ ದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿಯ ತಾರತಮ್ಯ ಹಾಗೂ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಪ್ರಶ್ನೆ ಮಾಡಿದ ಮಹಾನ್ ಸಂತನಾಗಿದ್ದು, ಅವರು ರಚಿಸಿದ ಸಾಹಿತ್ಯವು ಭಕ್ತಿಯ ಜೊತೆಗೆ ಅಂಧಕಾರವನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವರ ಪಾತ್ರ ಅನನ್ಯ ಎಂದರು.