ಭಾರತವು ಜನಸಂಖ್ಯೆ, ಭಾಷೆ, ಜನಜಾತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಜಗತ್ತಿನ ಗಮನ ಸೆಳೆದಿರುವ ದೇಶವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು ನಮ್ಮ ದೇಶದ ವಿಶಿಷ್ಟತೆಯಾಗಿದೆ.

ಶಿರಸಿ: ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅರಿವಿಲ್ಲದೇ ಕೆಲವರು ಟೀಕಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಬಗ್ಗೆ ಸಮರ್ಪಕ ಅರಿವಿಲ್ಲದೆ ಟೀಕೆ ಮಾಡುವುದು ಸರಿಯಲ್ಲ. ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ನೈಜ ಸಂಗತಿಗಳನ್ನು ತಿಳಿಸಬೇಕು. ಸಮಾಜದೊಳಗಿನ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ನಮ್ಮ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಬೇಕು ಕೊಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.

ಶುಕ್ರವಾರ ನಗರದ ರಾಘವೇಂದ್ರ ಮಠದ ಆವರಣದಲ್ಲಿ ವಿಷ್ಣುಯಾಗ ಮತ್ತು ಬೃಹತ್ ಹಿಂದೂ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ, ಜಾಗೃತಿ ಸಂದೇಶ ನೀಡಿದ ಅವರು, ಭಾರತವು ಜನಸಂಖ್ಯೆ, ಭಾಷೆ, ಜನಜಾತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಜಗತ್ತಿನ ಗಮನ ಸೆಳೆದಿರುವ ದೇಶವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು ನಮ್ಮ ದೇಶದ ವಿಶಿಷ್ಟತೆಯಾಗಿದೆ ಎಂದರು.

ಅಪಾರ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಭಾರತೀಯ ಸಮಾಜ ಸಂಘಟಿತವಾಗಿ ಮುನ್ನಡೆಯಬೇಕಿದೆ. ಹಿಂದೂ ಸಮಾಜದಲ್ಲಿರುವ ಲೋಪ- ದೋಷಗಳನ್ನು ಸರಿಪಡಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು. ಭಾರತದಲ್ಲಿ ಭ್ರಷ್ಟಾಚಾರ, ಅನಾಚಾರ ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ದೇಶ ಪ್ರಗತಿಯತ್ತ ಸಾಗುತ್ತಿದೆ.

ಹನುಮಂತನ ಅನುಯಾಯಿಗಳಾದ ನಮ್ಮಲ್ಲಿ ಅಪಾರ ಶಕ್ತಿ ಮತ್ತು ಸಾಮರ್ಥ್ಯವಿದೆ. ಆದರೆ ಆ ಸಾಮರ್ಥ್ಯವನ್ನು ಸರಿಯಾಗಿ ಅರಿತುಕೊಂಡು ಸಂಘಟಿತರಾಗುವ ಅಗತ್ಯವಿದೆ. ಸಂಕಷ್ಟ ಎದುರಾದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಮೊದಲಿನಿಂದಲೇ ಸಮಾಜದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಶಿರಳಗಿ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಸನಾತನ ಧರ್ಮ ಜಗತ್ತಿನ ಅತ್ಯಂತ ಶ್ರೇಷ್ಠವಾಗಿದೆ. ಆದರೆ ಅದರ ಆಳವಾದ ತತ್ವಗಳು ನಮಗೇ ಸಂಪೂರ್ಣವಾಗಿ ಪರಿಚಯವಿಲ್ಲ. ಭಗವದ್ಗೀತೆ ಮತ್ತು ಉಪನಿಷತ್ತುಗಳು ಸಾರುವ ವಿಚಾರಗಳನ್ನು ಅರಿತುಕೊಳ್ಳುವ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.

ಉದ್ಯಮಿ ಡಾ. ಎಚ್‌.ಎಸ್‌. ಶೆಟ್ಟಿ ಮಾತನಾಡಿ, ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜತೆಗೆ ಧರ್ಮಾಚರಣೆಯೂ ಹೆಚ್ಚಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಧಾರ್ಮಿಕ ನಾಯಕರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮದ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ ಮಳಲಗಾಂವ ಹಾಗೂ ಗೋರಕ್ಷಕ ತಂಡದ ರವಿ ಗೌಳಿ ಅವರನ್ನು ಶ್ರೀಗಳು ಮತ್ತು ಗಣ್ಯರು ಸನ್ಮಾನಿಸಿ, ಗೌರವಿಸಿದರು.

ರಾಘವೇಂದ್ರ ಸೇವಾ ಸಮಿತಿ ಕಾರ್ಯದರ್ಶಿ ಪ್ರೊ. ಕೆ.ವಿ. ಭಟ್ಟ ಸ್ವಾಗತಿಸಿ, ಗಣ್ಯರನ್ನು ಪರಿಚಯಿಸಿದರು. ಗೌರಿ ಮಹಿಳಾ ಭಜನಾ ಮಂಡಳಿಯವರು ಪ್ರಾರ್ಥಿಸಿದರು. ಸುಧೀರ ಬೆಂಗ್ರೆ ವಂದೇ ಮಾತರಂ ಗೀತೆ ಹಾಡಿದರು. ಅವನಿ ಶ್ಲೋಕ ಪ್ರಸ್ತುತಪಡಿಸಿದರು. ವೈದಿಕರಿಂದ ವೇದಘೋಷ ನಡೆಯಿತು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.