ಜೆಸ್ಕಾಂ ಕಚೇರಿಯ ಎಇ ಟೆಕ್ನಿಕಲ್ ಹುದ್ದೆಯಲ್ಲಿದ್ದ ನೂರ್ ಫಾತಿಮಾ ಇವರನ್ನು ಕೆಪಿಟಿಸಿಎಲ್ ನಿಂದ ಶಾಖೆಯ ಹುದ್ದೆಗೆ ಎಇ ಆಗಿ ವರ್ಗಾವಣೆ ಮಾಡಲಾಗಿತ್ತು.
ಕಾರಟಗಿ: ಇಲ್ಲಿನ ಜೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಇಇ ಹಾಗೂ ಎಇಇ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮೀಟರ್ ರೀಡರ್ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ನಡುವಿನ ಭಿನ್ನಾಭಿಪ್ರಾಯ ಕುರಿತು ನಡೆದ ಸಭೆಯ ವೇಳೆ ಈ ಹೈಡ್ರಾಮಾ ನಡೆದಿದ್ದು, ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿವೆ. ಮೀಟರ್ ರೀಡರ್ ದುರುಗಯ್ಯ್ ಅವರೇ ವಿಷ ಸೇವಿಸಿ ಅಸ್ವಸ್ಥರಾಗಿರುವ ವ್ಯಕ್ತಿ. ಘಟನೆ ನಡೆಯುತ್ತಿದ್ದಂತೆ ಕೆಲ ಸಿಬ್ಬಂದಿ ಹಾಗೂ ಪವರ್‌ಮನ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ವಿಷ ಸೇವನೆ ತಡೆಯಲು ಯತ್ನಿಸಿದ್ದಾರೆ. ಬಳಿಕ ದುರುಗಯ್ಯ ಅವರನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ಜೆಸ್ಕಾಂ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
ಪ್ರಕರಣದ ಹಿನ್ನೆಲೆ:
ಇಲ್ಲಿನ ಜೆಸ್ಕಾಂ ಕಚೇರಿಯ ಎಇ ಟೆಕ್ನಿಕಲ್ ಹುದ್ದೆಯಲ್ಲಿದ್ದ ನೂರ್ ಫಾತಿಮಾ ಇವರನ್ನು ಕೆಪಿಟಿಸಿಎಲ್ ನಿಂದ ಶಾಖೆಯ ಹುದ್ದೆಗೆ ಎಇ ಆಗಿ ವರ್ಗಾವಣೆ ಮಾಡಲಾಗಿತ್ತು. ಅದರಂತೆ ನೂರ್ ಫಾತಿಮಾ ಅವರು ಜು. 7ರಂದು ಸಂಜೆ 5 ಗಂಟೆ ಸುಮಾರಿಗೆ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಆದರೆ ಈ ವಿಷಯ ತಿಳಿದ ಮೀಟರ್ ರೀಡರ್ ಮತ್ತು ಕೆಲ ಲೈನ್ ಮ್ಯಾನ್ ಸಿಬ್ಬಂದಿ ನೂರ್ ಫಾತಿಮಾ ಅವರ ಕೈಕೆಳಗೆ ಕೆಲಸ ಮಾಡಲಾಗುವುದಿಲ್ಲ ಎಂದು ಇಇ ವಿರೇಶ್ ಹಾಗೂ ಎಇಇ ಮಂಜುನಾಥಗೆ ತಿಳಿಸಿದರು.
ಈ ಕಾರಣಕ್ಕಾಗಿ ಅಧಿಕಾರಿಗಳು ಬುಧವಾರ ಬೆಳಗ್ಗೆ ಸಭೆ ಕರೆಯುವುದಾಗಿ ತಿಳಿಸಿ ಅದರಂತೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಇಇ ಕಚೇರಿಯಲ್ಲಿ ಸಭೆ ಏರ್ಪಡಿಸಿ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಮೀಟರ್ ರೀಡರ್ ದುರುಗಯ್ಯ ಇಇ ಮತ್ತು ಎಇಇ ಮುಂದೆ ನೂರ್ ಫಾತಿಮಾ ಅವರ ಕೈಕೆಳಗೆ ನಮಗೆ ಕೆಲಸ ಮಾಡಲು ಆಗಲ್ಲ ಎಂದು ತಿಳಿಸಿದ್ದಾರೆ.
ಆಗ ಸಭೆಯಲ್ಲಿದ್ದ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವಂತೆ ಸೂಚಿಸಿದರು. ಆದರೆ ಇದೇ ವೇಳೆ ಮೀಟರ್ ರೀಡರ್ ದುರುಗಯ್ಯ ನಾವು ಕೆಲಸ ಮಾಡುವುದಕ್ಕಿಂತ ಸಾಯುವುದೇ ಮೇಲೂ ಎಂದು ಏಕಾಏಕಿ ತಾನು ತಂದಿದ್ದ ವಿಷದ ಬಾಟಲಿ ತೆಗೆದು ವಿಷ ಸೇವಿಸಲು ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಕೆಲ ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್ ಸಿಬ್ಬಂದಿ ತಡೆಯಲು ಮುಂದಾಗಿದ್ದಾರೆ. ಬಳಿಕ ದುರುಗಯ್ಯನನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೋಯ್ಯಲಾಗಿದೆ. ನಂತರ ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ದುರುಗಯ್ಯ ಹೇಳಿಕೆ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.