ಉಪ ವಿಭಾಗಾಧಿಕಾರಿಗೆ ಮನವಿ । ಬಡವರ ಶೋಷಣೆ ತಡೆಗೆ ಕ್ರಮ ಅಗತ್ಯ
ಕನ್ನಡಪ್ರಭ ವಾರ್ತೆ ಸಾಗರರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚುತ್ತಿದ್ದು ಬಡವರ ಮೇಲಿನ ಆರ್ಥಿಕ ಶೋಷಣೆ ಮಿತಿ ಮೀರಿದೆ. ಜನಸಾಮಾನ್ಯರು ಆರೋಗ್ಯ ಸಮಸ್ಯೆ, ಮದುವೆ ಇನ್ನಿತರೆ ಕಾರ್ಯಗಳಿಗೆ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದಿರುತ್ತಾರೆ. ಆದರೆ ಮೈಕ್ರೋ ಫೈನಾನ್ಸ್‌ನ ಸಿಬ್ಬಂದಿ ವರ್ಗದವರು ಸಾಲ ವಸೂಲಿ ಮಾಡುವ ಸಂದರ್ಭದಲ್ಲಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಮನೆಯೊಳಗೆ ನುಗ್ಗಿ ಅಮಾನವೀಯತೆ ಮೆರೆಯುತ್ತಿದ್ದಾರೆ. ಈ ಶೋಷಣೆ ನಿಲ್ಲಬೇಕಾದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೈಕ್ರೋ ಫೈನಾನ್ಸ್ ನಿಯಂತ್ರಿಸುವ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಬೇಕು ಎಂದು ಒತ್ತಾಯಿಸಿದರು.ದಲಿತ ಮುಖಂಡ ಎಲ್.ಚಂದ್ರಪ್ಪ ಮಾತನಾಡಿ, ಎಲ್ಲಿಯೋ ಕುಳಿತು ಜನರಿಗೆ ಸಾಲ ಕೊಟ್ಟು ಅವರನ್ನು ಶೋಷಣೆ ಮಾಡುವ ಕೆಲಸವನ್ನು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ. ಜನರು ಕಷ್ಟಕ್ಕಾಗಿ ಸಾಲ ಪಡೆಯುತ್ತಾರೆ. ಆದರೆ ಅವರನ್ನು ಶೋಷಣೆ ಮಾಡಲು ಅತಿಹೆಚ್ಚು ಬಡ್ಡಿ ಹಾಕಿ ಸತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದು ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಶೋಷಣೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಮಹತ್ವದ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಆದರೆ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸುಂದರಸಿಂಗ್, ಎನ್.ಡಿ.ವಸಂತಕುಮಾರ್, ರವಿಕುಗ್ವೆ, ಪರಮೇಶ್ವರ ದೂಗೂರು, ಮರಿಯಾ ಲೀಮಾ, ಎಚ್.ಬಿ.ರಾಘವೇಂದ್ರ, ರಾಮಣ್ಣ ಹಸಲರು, ನಾಗರಾಜ್, ಸರೋಜ ಎಂ.ಎಸ್., ವಿಲ್ಸನ್ ಗೋನ್ಸಾಲ್ವಿಸ್, ಯು.ಪಿ.ಜೋಸೆಫ್, ಗುತ್ಯಪ್ಪ, ನಾರಾಯಣ, ಲಕ್ಷ್ಮಣ್ ಸಾಗರ್, ಮೈಕೆಲ್ ಡಿಸೋಜ, ಆರ್ಥರ್ ಗೋಮ್ಸ್ ಇತರರು ಹಾಜರಿದ್ದರು.