ಆಳ್ವಾಸ್ ಸಂಸ್ಥೆಗಳ ಹಿಂದಿನ ಸ್ಫೂರ್ತಿ ಶಕ್ತಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಇನ್ನಿಲ್ಲ

KannadaprabhaNewsNetwork | Published : Nov 1, 2023 1:03 AM

ಸಾರಾಂಶ

ದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮಿಜಾರುಗುತ್ತು ಮನೆತನದಲ್ಲಿ ೧೯೧೬ರ ಆಗಸ್ಟ್ ೧೫ರಂದು ಜನಿಸಿದ ಅವರು, ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿ ಅಡಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.
ಮೂಡುಬಿದಿರೆ: ಕೃಷಿ, ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ, ವಿದ್ಯಾ ಕ್ಷೇತ್ರ ಹಾಗೂ ಸಮಾಜ ಸೇವೆಗಳಲ್ಲಿ ಸಕ್ರಿಯರಾಗಿದ್ದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ(107) ಮಂಗಳವಾರ ನಿಧನ ಹೊಂದಿದರು. ಅವರು ಪುತ್ರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಹಿತ ಮೂವರು ಪುತ್ರರು, ಓರ್ವ ಪುತ್ರಿ. ಮೊಮ್ಮಕ್ಕಳು, ಬಂಧು ವರ್ಗವನ್ನು ಅಗಲಿದ್ದಾರೆ. ದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮಿಜಾರುಗುತ್ತು ಮನೆತನದಲ್ಲಿ ೧೯೧೬ರ ಆಗಸ್ಟ್ ೧೫ರಂದು ಜನಿಸಿದ ಅವರು, ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿ ಅಡಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಮಿಜಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸ್ಥಾಪಕ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅವರು, ಮೂಡುಬಿದಿರೆ ಶೈಕ್ಷಣಿಕ ಕ್ರಾಂತಿಗೆ ಅರಿವಿನ ಸ್ಫೂರ್ತಿಯ ಸೆಲೆಯಾಗಿದ್ದರು. ಕೃಷಿ ಕ್ರೀಡೆಯ ಹಿರಿಯ ಪ್ರೋತ್ಸಾಹಕರಾಗಿದ್ದರು. ಮಿಜಾರು ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ಪರಿಚಯಿಸಿದ ಹಿರಿಮೆ ಜತೆಗೆ ಆಗ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರನ್ನೂ ಕಂಬಳಕ್ಕೆ ಕರೆಸಿ ಈ ಕ್ರೀಡೆಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಬದುಕಿನ ಸಂಧ್ಯಾಕಾಲದವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನಿಕಟವರ್ತಿಯಾಗಿದ್ದ ಆನಂದ ಆಳ್ವರು, ನಾಗಮಂಡಲ, ಬ್ರಹ್ಮಕಲಶ, ದೈವಾರಾಧನೆ ಸೇರಿದಂತೆ ಧರ್ಮ ಮತ್ತು ಸಂಸ್ಕೃತಿಯ ಕೈಂಕರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೇರಿದಂತೆ ಆಳ್ವಾಸ್‌ನ ಆರೋಗ್ಯ ಕೇಂದ್ರ ಮತ್ತಿತರ ಘಟಕಗಳ ಸ್ಥಾಪನೆಯ ಪ್ರೇರಕರು. ಸೌಹಾರ್ದತೆಯ ಸೆಲೆಯಾಗಿದ್ದ ಆನಂದ ಆಳ್ವರು, ಸರ್ವ ಧರ್ಮಿಯರೊಂದಿಗೆ ಸಹಬಾಳ್ವೆಯ ಜೀವನ ನಡೆಸಿದವರು. ಪ್ರತಿ ವರ್ಷವೂ ಆಗಸ್ಟ್ 15ರಂದು ತಂದೆಯ ಹುಟ್ಟುಹಬ್ಬದ ಜತೆಗೆ ತಮ್ಮ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡಗಳನ್ನುತಂದೆಯವರ ಅಮೃತ ಹಸ್ತಗಳಿಂದ ಉದ್ಘಾಟಿಸುವ ಪರಂಪರೆ ಬೆಳೆಸುವ ಮೂಲಕ ಡಾ. ಮೋಹನ ಆಳ್ವ ತಂದೆಯವರ ಮೇಲಿನ ಪ್ರೀತಿ ಗೌರವವನ್ನು ವ್ಯಕ್ತಪಡಿಸುತ್ತಿದ್ದದ್ದು ಗಮನಾರ್ಹವಾಗಿತ್ತು. ಇಂದು ಅಂತ್ಯಕ್ರಿಯೆ: ಆನಂದ ಆಳ್ವರ ಪಾರ್ಥಿವ ಶರೀರದ ದರ್ಶನಕ್ಕೆ ಮಿಜಾರಿನ ಸ್ವಗೃಹದಲ್ಲಿ ಬುಧವಾರ (ನ.೧ರಂದು) ಬೆಳಿಗ್ಗೆ ೯.೩೦ರಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಡಾ. ಹೆಗ್ಗಡೆ ಸಂತಾಪ ಮಿಜಾರುಗುತ್ತು ಆನಂದ ಆಳ್ವರ ನಿಧನದಿಂದ ದುಃಖವಾಗಿದೆ. ಅವರ ಸರಳ ಹಾಗೂ ಆದರ್ಶ ವ್ಯಕ್ತಿತ್ವ ನಮ್ಮ ಜಿಲ್ಲೆಯಲ್ಲಿ ಸದಾ ಸ್ಮರಣೀಯವಾಗಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ. ಪ್ರಗತಿಪರ ಕೃಷಿಕರಾಗಿ ಅವರು ಕೃಷಿ ರಂಗದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಗೋವುಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ, ಕಾಳಜಿ ಇತ್ತು. ಧರ್ಮಸ್ಥಳಕ್ಕೆ ಬಂದಾಗಲೆಲ್ಲ ಅವರು ಇಲ್ಲಿರುವ ಗೋ ಶಾಲೆಗೆ ಹೋಗಿ ಗೋವುಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸುತ್ತಿದ್ದರು.೧೯೭೦ರ ದಶಕದಲ್ಲಿ ಅನೇಕ ಉದ್ಯಮಗಳನ್ನು ಅವರು ಪ್ರಾರಂಭಿಸಿ ಯುವಜನತೆಯನ್ನು ಪ್ರೋತ್ಸಾಹಿಸಿದರು. ತಮ್ಮ ಎಲ್ಲ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಶಿಸ್ತುಬದ್ಧವಾಗಿ, ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಿದ್ದಾರೆ. ಶಿಕ್ಷಣ ರಂಗದಲ್ಲಿ ಅವರ ಮಗ ಡಾ. ಮೋಹನ ಆಳ್ವರ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಆನಂದ ಆಳ್ವರ ನಿಧನದಿಂದ ನನಗೆ ಅತೀವ ದುಃಖವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆ ಅವರು ಹೇಳಿದ್ದಾರೆ.

Share this article