ಮನ್ಮುಲ್ ನಲ್ಲಿ ಹಾಲಿನ ಪುಡಿ ಕಲಬೆರಕೆ ಪ್ರಕರಣ: ತನಿಖೆ ಹಳ್ಳ ಹಿಡಿಸುವ ಪ್ರಶ್ನೆಯೇ ಇಲ್ಲ

KannadaprabhaNewsNetwork |  
Published : Oct 09, 2026, 01:45 AM IST
8ಕೆಎಂಎನ್ ಡಿ24 | Kannada Prabha

ಸಾರಾಂಶ

ಹಾಲಿನ ಪುಡಿ ಹಗರಣದಲ್ಲಿ ಈಗಾಗಲೇ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿರುವಾಗಲೂ ಮೈತ್ರಿ ಪಕ್ಷದವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮನ್ಮುಲ್‌ನಲ್ಲಿ ನಡೆದಿರುವ ಹಾಲಿನಪುಡಿ ಕಲಬೆರಕೆ ಪ್ರಕರಣದಲ್ಲಿ ಪಕ್ಷಾತೀತವಾಗಿ ಯಾರೇ ಶಾಮೀಲಾಗಿದ್ದರು ಅವರ ವಿರುದ್ಧ ಕಠಿಣ ಕ್ರಮವಾಗಲಿದೆ. ತನಿಖೆ ಹಳ್ಳ ಹಿಡಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ.ಎಂ.ಉದಯ್ ಸ್ಪಷ್ಟಪಡಿಸಿದರು.

ತಾಲೂಕಿನ ವಳಗೆರೆಹಳ್ಳಿ, ದೇಶಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳಲ್ಲಿ ಎಸ್ಸಿಪಿ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಅಂದಾಜು 1 ಕೋಟಿ ರು. ವೆಚ್ಚದಲ್ಲಿ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಹಲವು ಹಗರಣಗಳು ನಡೆದಿವೆ. ಅವುಗಳ ತನಿಖೆಯನ್ನು ಬಿಜೆಪಿ ನಾಯಕರು ಹಳ್ಳ ಹಿಡಿಸಿದ್ದಾರೆ. ಹೀಗಾಗಿ ಈ ಹಗರಣವು ಮುಚ್ಚಿ ಹೋಗುತ್ತದೆ ಎಂಬ ಕಲ್ಪನೆ ಅವರದು. ಆದರೆ, ಮನ್ಮುಲ್ ಈ ರಾಜ್ಯದ ರೈತರ ಜೀವನಾಡಿಯಾಗಿದೆ. ರೈತರ ಸಂಸ್ಥೆಯಲ್ಲಿ ಅಕ್ರಮವನ್ನು ಯಾರೇ ಮಾಡಿದ್ದರು ಕಾಪಾಡುವ ಪ್ರಶ್ನೆಯೇ ಇಲ್ಲ. ಇದರ ಸತ್ಯಾಸತ್ಯತೆ ಹೊರ ಬರಲು ಮಾಜಿ ಅಧ್ಯಕ್ಷರನ್ನೇ ಬಂಧಿಸಲಾಗಿದೆ ಎಂದರು.

ಹಾಲಿನ ಪುಡಿ ಹಗರಣದಲ್ಲಿ ಈಗಾಗಲೇ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿರುವಾಗಲೂ ಮೈತ್ರಿ ಪಕ್ಷದವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಸಹ ಪ್ರಕರಣ ಸಂಬಂಧ ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಪಕ್ಷದ ಬೆಂಬಲಿತರೇ ಅಧ್ಯಕ್ಷರಾಗಿದ್ದಾರೆ. ಈ ಹಗರಣ ಕಂಡು ಬಂದ ಹಿನ್ನೆಲೆಯಲ್ಲಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದರು.

ಪೊಲೀಸ್ ಅಧಿಕಾರಿಗಳು ಸಹ ನಿಷ್ಪಕ್ಷಪಾತವಾಗಿ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಮೈತ್ರಿ ಪಕ್ಷದವರಿಗೆ ಕೆಲಸವಿಲ್ಲದೇ ಇಲ್ಲದೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಮಾಜಿ ಉಪಾಧ್ಯಕ್ಷ ಪ್ರೀತಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಾಜೇಂದ್ರ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ಜಿಲ್ಲಾ ಉಪಾಧ್ಯಕ್ಷ ಆದೇಶ್, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಶಂಕರ್, ನಿತೀನ್, ಯೋಗರಾಜ್, ಸಿದ್ದರಾಜು, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಯು.ಸಿ.ಶಿವಕುಮಾರ್, ಕೇರಳ ಸುರೇಶ್ ಮತ್ತೆ ಪೊಲೀಸ್ ವಶಕ್ಕೆ

ಕನ್ನಡಪ್ರಭ ವಾರ್ತೆ ಮದ್ದೂರುಹಾಲಿನಪುಡಿ ಕಲಬೆರಕೆ ಹಗರಣದ ಆರೋಪಿಗಳಾದ ಮನ್‌ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಮತ್ತು ಕೇರಳದ ವಿ.ಕೆ.ಸುರೇಶ್ ಅವರನ್ನು ಪೊಲೀಸರು ಮತ್ತೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಯು.ಸಿ.ಶಿವಕುಮಾರ್ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಮದ್ದೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಹೆಚ್ಚಿನ ವಿಚಾರಣೆಯ ಅವಶ್ಯಕತೆ ಇರುವುದರಿಂದ ಯು.ಸಿ.ಶಿವಕುಮಾರ್ ಅವರನ್ನು ಐದು ದಿನಗಳ ಕಾಲ ವಿಚಾರಣೆಗೆ ನೀಡುವಂತೆ ಸರ್ಕಾರ ಅಭಿಯೋಜಕ ಪ್ರೀತಂ ಡೇವಿಡ್‌ ಅವರ ಮೂಲಕ ನ್ಯಾಯಾಧೀಶರಿಗೆ ಮನವಿ ಮಾಡಿದರು. ಕೊನೆಗೆ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಎಸ್‌.ಆರ್‌.ನಂದಿನಿ ಅವರು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು.ಇದೇ ವೇಳೆ ಪ್ರಕರಣದ ಆರನೇ ಆರೋಪಿ ಕೇರಳ ರಾಜ್ಯದ ಕ್ಯಾಲಿಕಟ್‌ನ ವಿ.ಕೆ.ಎಸ್ ಮಾರ್ಕೆಟಿಂಗ್ ಮಾಲೀಕ ವಿ.ಕೆ.ಸುರೇಶ್ ಅವರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಈತ ಹಾಲಿನಪುಡಿ ಕಲಬೆರಕೆ ಮಾಡಲು ಗ್ರೈನ್ ಸ್ಟಾರ್ಚ್ ಸರಬರಾಜು ಮಾಡಿದ್ದನು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಲು ಮದ್ದೂರು ವೃತ್ತ ನಿರೀಕ್ಷಕ ಎಚ್.ಎಸ್.ನವೀನ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತನಿಖಾಧಿಕಾರಿ ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ ಎಸ್.ಬಿ.ಯಶವಂತಕುಮಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರೂಣಪತ್ತೆ ನಡೆಸುವ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ಕ್ರಮ ಜರುಗಿಸಿ
ನೆಲ-ಜಲ ರಕ್ಷಣೆ, ಒತ್ತುವರಿ ತೆರವು, ಪಹಣಿ ಇಂಡೀಕರಣ ತ್ವರಿತಗೊಳಿಸಿ