ಸಚಿವ ಬಸವರಾಜ ರಾಯರಡ್ಡಿ ಮೊದಲು ತಮ್ಮ ಅಪ್ಪ, ಅಜ್ಜನ ಧರ್ಮ, ನಡೆಯನ್ನು ಅಧ್ಯಯನ ಮಾಡಲಿ. ಮಾನಸಿಕ ಸಮತೋಲನ ಕಳೆದುಕೊಂಡು ಎಡಬಿಡಂಗಿತನ ಮಾಡುವುದು ಬೇಡ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದ್ದಾರೆ.
ಕುಕನೂರು: ಸಚಿವ ಬಸವರಾಜ ರಾಯರಡ್ಡಿ ಮೊದಲು ತಮ್ಮ ಅಪ್ಪ, ಅಜ್ಜನ ಧರ್ಮ, ನಡೆಯನ್ನು ಅಧ್ಯಯನ ಮಾಡಲಿ. ಮಾನಸಿಕ ಸಮತೋಲನ ಕಳೆದುಕೊಂಡು ಎಡಬಿಡಂಗಿತನ ಮಾಡುವುದು ಬೇಡ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದ್ದಾರೆ.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜ ರಾಯರಡ್ಡಿ ಅವರು ಎಲ್ಲ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠ ಅಂದಿದ್ದಾರೆ. ಅವರು ಯಾವ ಧರ್ಮದವರು? ಅವರಿಗೆ ಅವರ ಧರ್ಮ ಶ್ರೇಷ್ಠ ಅಲ್ಲವೇ? ಎಲ್ಲರಿಗೂ ಅವರ ತಂದೆ-ತಾಯಿ ಶ್ರೇಷ್ಠ ಹಾಗೂ ಅವರ ಧರ್ಮವೂ ಶ್ರೇಷ್ಠ ಆಗಿರಬೇಕು. ಮಂತ್ರಿಯಾಗಿ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳಲ್ಲಿ ಜನರ ಮನಸ್ಸು ಘಾಸಿಗೊಳಿಸಲು ಯಾರನ್ನೋ ಓಲೈಸಲು ಸ್ವಂತ ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ. ಸಚಿವ ರಾಯರಡ್ಡಿ ಅವರ ತಂದೆ ಬಸಲಿಂಗಪ್ಪ ಅವರು ಹತ್ತು ವರ್ಷಗಳ ಕಾಲ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಿಂದೂ ಧರ್ಮಾಚರಣೆ ಮಾಡಿದರು. ಇವರು ಅವರಿಗೇನು ಬೆಲೆ ಕೊಟ್ಟಂತ್ತಾಯಿತು ಎಂದು ಪ್ರಶ್ನಿಸಿದರು.
ಧರ್ಮ-ಧರ್ಮದಲ್ಲಿ ಬೆಂಕಿ ಹಚ್ಚುವ ಕೆಲಸ ಆಗಬಾದರು. ಮೆಕ್ಕಾಗೆ ಹೋಗುವ ಅವಕಾಶ ಇಲ್ಲ ಎಂದು ಸಚಿವ ರಾಯರಡ್ಡಿ ಹೇಳಿದ್ದಾರೆ. ಹೋಗಬೇಕೆಂದರೆ ಹೋಗುವ ಅವಕಾಶ ಮಾಡಿಸಿಕೊಳ್ಳಿ ಎಂದು ಹಾಲಪ್ಪ ಆಚಾರ್ ಟೀಕಿಸಿದರು.
ಹೊಸ ಧರ್ಮ ಸ್ಥಾಪನೆ ಪೂರ್ವ ತಂದೆ-ತಾಯಿ ಹೇಗೆ ನಡೆದುಕೊಂಡಿದ್ದಾರೆ ಅನ್ನುವ ಅಧ್ಯಯನ ಮಾಡಿ. ತಂದೆ- ತಾಯಿ, ಅಜ್ಜನ ಧರ್ಮನಿಷ್ಠೆ ಪಾಲನೆ ಮಾಡಿ ಎಂದರು.
ಎಲ್ಲ ಧರ್ಮಕ್ಕಿಂತ ಮುಸ್ಲಿಂ ಧರ್ಮ ಶ್ರೇಷ್ಠ ಎಂದಿರುವ ಅರ್ಥ ಏನು, ವಿನಾಶ ಕಾಲೇ ವಿಪರೀತಿ ಬುದ್ಧಿ ಎಂಬಂತೆ ಹೇಳುವುದು ಒಂದು ಮಾಡುವುದು ಎಂಬಂತೆ ರಾಯರಡ್ಡಿ ಅವರ ನಡೆ ರಾಷ್ಟ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನಗಳಿಗೆ ಹೋಗಬೇಡಿ ಎಂದು ಅವರೇ ದೇವಸ್ಥಾನಕ್ಕೆ ತೆರಳುತ್ತಿರುವುದು ಸಚಿವ ರಾಯರಡ್ಡಿ ಅವರ ಎಡಬಿಡಂಗಿತನದ ಪ್ರದರ್ಶನ ಆಗಿದೆ ಎಂದಿದ್ದಾರೆ.
ಈ ವೇಳೆ ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಬಣ್ಣದಬಾವಿ, ಮಂಜುನಾಥ ನಾಡಗೌಡರ್, ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ, ಪ್ರಕಾಶ ತಹಸೀಲ್ದಾರ್, ಲಕ್ಷ್ಮಣ ಕಾಳಿ, ಬಸವರಾಜ ಹಾಳಕೇರಿ ಇತರರಿದ್ದರು.
ಬರ ಮರೆತು ದೆಹಲಿಯಲ್ಲಿ ಬಿಡುಬಿಟ್ಟಿದ್ದ ಕಾಂಗ್ರೆಸ್
ರಾಜ್ಯದಲ್ಲಿ ಬರ ಆವರಿಸಿದ್ದರೂ ಒಂದು ತಿಂಗಳ ಪರ್ಯಂತ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟು ರಾಜ್ಯವನ್ನು ಕತ್ತಲೆಗೆ ದೂಡಿದರು. ಕೇವಲ 101 ತಾಲೂಕು ಮಾತ್ರ ಬರಪೀಡಿತ ಎಂದು ಘೋಷಣೆ ಆಗಿವೆ. ರೈತಪರ ಜನಪರ ಕಾಳಜಿ ಸರ್ಕಾರಕ್ಕಿಲ್ಲ. ಅಭಿವೃದ್ಧಿಗೆ ಹಣ ಇಲ್ಲ ಅನ್ನುವ ಸಚಿವ ರಾಯರಡ್ಡಿ ಅವರು ಮತ್ತೊಂದು ಕಡೆ ಸಾಕಷ್ಟು ಹಣ ಇದೆ ಅನ್ನುತ್ತಾರೆ. ಕ್ಷೇತ್ರದ ಜನರ ಭ್ರಮನಿರಸ ಮಾಡಿದ್ದಾರೆ. ಬೆಣಕಲ್ಲ ಕೆರೆಗೆ ಇದುವರೆಗೂ ನೀರು ಬಂದಿಲ್ಲ. ಇದರಿಂದ ಅಲ್ಲಿನ ರೈತರಿಗೆ ನಷ್ಟವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಹಿಂದೆ ಮಹಮ್ಮದ್ ಅಲಿ ಜಿನ್ನಾಓಲೈಸಲು ನೆಹರು ಅವರು ಭಾರತದ ವಿಭಜನೆ ಮಾಡಿದರು. ಕಾಂಗ್ರೆಸ್ ಡಿಎನ್ಎದಲ್ಲಿ ಒಡೆದಾಳುವ ನೀತಿ ಬಂದಿದೆ. ಅದೇ ರೀತಿ ಸಚಿವ ಬಸವರಾಜ ರಾಯರಡ್ಡಿ ಜನರನ್ನು ಓಲೈಸಲು ಹೋಗಿ ಧರ್ಮ-ಧರ್ಮಗಳ ಮಧ್ಯೆ ಒಡೆದಾಡುವ ನೀತಿ ಅನುಸರಿಸುತ್ತಿದ್ದಾರೆ.
ಸಿಎಂ ಡಿಕೆಶಿಗೆ ದಮ್ಮು, ತಾಕತ್ತಿದ್ದರೆ ಸಚಿವ ರಾಯರಡ್ಡಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಪಕ್ಷಗಳು ಮಾತ್ರವಲ್ಲದೇ ಜನರು ರಾಯರಡ್ಡಿ ಅವರು ನೀಡಿರುವ ಹೇಳಿಕೆ ಖಂಡಿಸಿದ್ದಾರೆ. ಅವರು ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.